ಮನೆ ಸುದ್ದಿ ಜಾಲ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಡಾ ಕೆ ಸುಧಾಕರ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಡಾ ಕೆ ಸುಧಾಕರ್

0

ಬೆಂಗಳೂರು: ಈಗಾಗಲೇ ಎರಡು ಬಾರಿ ಲಾಕ್ ಡೌನ್ ಹೇರಿಕೆ ಮಾಡಲಾಗಿತ್ತು. ಆಗ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಾಗಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಮುಖ್ಯಮಂತ್ರಿಗಳ ಜೊತೆ ಸಂವಾದ ಮಾಡುವ ಸಂದರ್ಭದಲ್ಲಿ ಜನರಿಗೆ ಆರ್ಥಿಕ ನಷ್ಟವಾಗದ ರೀತಿಯಲ್ಲಿ ಜಾಗೃತೆ ವಹಿಸಬೇಕೆಂದು ಹೇಳಿದ್ದಾರೆ, ಆ ನಿಟ್ಟಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಜನರೇ ಸ್ವಯಂ ನಿಯಂತ್ರಣ ಮಾಡಿಕೊಂಡು ಇನ್ನು ಒಂದೂವರೆ ತಿಂಗಳು ಸಹಕರಿಸಿದರೆ ಖಂಡಿತವಾಗಿಯೂ ಕೊರೋನಾ ನಿಯಂತ್ರಣವಾಗುತ್ತದೆ, ಲಾಕ್ ಡೌನ್ ಹೇರಿಕೆಯೊಂದೇ ಅಸ್ತ್ರವಲ್ಲ ಎಂದರು.

ಬೆಂಗಳೂರಿನಲ್ಲಿ ಕೊರೋನಾ ಸೋಂಕು ಜಾಸ್ತಿಯಾಗುತ್ತಿದೆ. ಶೇಕಡಾ 5ರಿಂದ 6ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿರುವುದು ಒಂದು ಸಮಾಧಾನದ ಸಂಗತಿ. ವೈದ್ಯರು, ದಾದಿಯರಿಗೂ ಬರುತ್ತಿರುವುದರಿಂದ ಆರೋಗ್ಯ ಸೇವೆಗೆ ವ್ಯತ್ಯಯವಾಗಬಹುದು ಎಂಬ ಆತಂಕವಿದೆ ಎಂದರು.

ಕೊರೋನಾ ನಿಯಂತ್ರಣವಾಗಲು ಕನಿಷ್ಠ 14-15 ದಿನ ಬೇಕು. ವೀಕೆಂಡ್ ಕರ್ಫ್ಯೂ, ಕೊರೋನಾ ನಿರ್ಬಂಧ ಮಾಡಿ ಎರಡು ವಾರಗಳಾಗಿವೆಯಷ್ಟೆ. ಒಂದೇ ವಾರದಲ್ಲಿ ಕೊರೋನಾ ಸೋಂಕು ಕಡಿಮೆಯಾಗುವುದಿಲ್ಲ. ಓಮಿಕ್ರಾನ್ 5ರಿಂದ 6 ಪಟ್ಟು ವೇಗವಾಗಿ ಹರಡುತ್ತದೆ. ಕೊರೋನಾ ಮೂರನೇ ಅಲೆ ಇನ್ನೂ ಗರಿಷ್ಠ ಮಟ್ಟಕ್ಕೆ ತಲುಪಿಲ್ಲ. ಫೆಬ್ರವರಿ ಮೊದಲನೇ ವಾರ ಕೊರೋನಾ ಸೋಂಕು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಮೂರು-ನಾಲ್ಕನೇ ವಾರದಿಂದ ಸ್ವಲ್ಪ ಕಡಿಮೆಯಾಗಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ಡಾ ಕೆ ಸುಧಾಕರ್ ಹೇಳಿದರು.