ಬೆಂಗಳೂರು(Bengaluru): ಬೆಂಗಳೂರಿನಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ಎಷ್ಟೇ ಪ್ರತಿರೋಧ ಬಂದರೂ ನಿಲ್ಲಿಸಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜಕಾಲುವೆ ಒತ್ತುವರಿಯಿಂದಾಗಿ ಮುಂದಿನ ಮಳೆಗಾಲಕ್ಕೆ ಈ ರೀತಿಯ ಸಮಸ್ಯೆ ಆಗಬಾರದು. ಎಲ್ಲರೂ ಸಹಕಾರ ಕೊಟ್ಟರೆ ನಿರಂತರವಾಗಿ ತೆರವು ಕಾರ್ಯಾಚರಣೆ ನಡೆಯಲಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೊದಲ ಆದ್ಯತೆ ಕೊಟ್ಟು ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ರಾಜಕಾಲುವೆ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಕಾರ್ಯಾಚರಣೆಯಲ್ಲಿ ಶ್ರೀಮಂತರ ಅಕ್ರಮ ಕಟ್ಟಡಗಳನ್ನು ತೆರವು ಮಾಡಲಾಗುತ್ತಿಲ್ಲ ಎಂಬ ಆರೋಪ ಇದೆ. ತೆರವು ಕಾರ್ಯಾಚರಣೆ ಪ್ರಶ್ನೆ ಮಾಡಿ ಕೆಲವರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ.
ಕುಮ್ಕಿ, ಬಾಣೆ ಜಮೀನು ರೈತರಿಗೆ ನೀಡಲು ಶೀಘ್ರದಲ್ಲಿ ಸರ್ಕಾರಿಂದ ಆದೇಶ ಮಲೆನಾಡು ಭಾಗದ ಕುಮ್ಕಿ, ಬಾಣೆ, ಸೊಪ್ಪಿನ ಬೆಟ್ಟ ಜಮೀನುಗಳನ್ನು ರೈತರಿಗೆ ನೀಡಲು ಆದಷ್ಟು ಬೇಗ ಈ ನಿಟ್ಟಿನಲ್ಲಿ ಸರ್ಕಾರಿಂದ ಆದೇಶ ಮಾಡಲಾಗುವುದು ಎಂದು ಆರ್ ಅಶೋಕ್ ಹೇಳಿದರು.
ಈ ಜಮೀನುಗಳನ್ನು ಅರಣ್ಯ ಭೂಮಿ ಅಂತ ಘೋಷಣೆ ಆಗಿದೆ. ಆದ್ರೆ 60-70 ವರ್ಷಗಳಿಂದ ಜನರಿಗೆ ಈ ಭೂಮಿಗಳಲ್ಲಿ ಸಾಗುವಳಿ ಮಾಡ್ತಿದಾರೆ. ಈ ಜಮೀನುಗಳಲ್ಲಿ ತೆಂಗು, ಅಡಿಕೆ ಬೆಳೆಯುತ್ತಿದ್ದಾರೆ. ಹೀಗಾಗಿ ಈತರದ ಜಮೀನುಗಳನ್ನು ಕಾನೂನು ತಿದ್ದುಪಡಿ ಮಾಡಿ ರೈತರಿಗೆ ಕೊಡಬೇಕು ಅಂತ ನಿರ್ಧಾರ ಮಾಡಿದ್ದೀವಿ. ಈ ಜಮೀನುಗಳನ್ನು ಅರಣ್ಯ ಭೂಮಿ ಮಾಡಲು ಈಗ ಆಗಲ್ಲ. ಹೀಗಾಗಿ ಬಡ ರೈತರಿಗೆ ಕೊಡಲು ತೀರ್ಮಾನ ಮಾಡಲಾಗುವುದು ಎಂದರು.
ಈ ಸಂಬಂಧ ಇಂದು ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಆದಷ್ಟು ಬೇಗ ಈ ನಿಟ್ಟಿನಲ್ಲಿ ಸರ್ಕಾರಿಂದ ಆದೇಶ ಮಾಡಲಾಗುವುದು ಎಂದು ತಿಳಿಸಿದರು.