ವಿಧಾನಸಭೆ : ಯತ್ನಾಳ್, ಎಷ್ಟೇ ಎದ್ದು ನಿಂತರೂ, ಕೂಗಾಡಿದರೂ, ಕಿರುಚಾಡಿದರೂ ನಿಮ್ಮನ್ನು ವಿಪಕ್ಷ ನಾಯಕ ಮಾಡುವುದಿಲ್ಲ ಎನ್ನುವ ಮಾಹಿತಿ ನನಗಿದೆ ಎಂದು ಬುಧವಾರ ನಡೆದ ವಿಧಾನಸಭಾ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದಿದ್ದಾರೆ.
ಯತ್ನಾಳ್ ಅವರು ಉಚಿತಗಳ ಕುರಿತಾಗಿ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ, ಯತ್ನಾಳ್ , ಸ್ವಲ್ಪ ಸುಮ್ಮನ್ನಿರ್ರೀ.. ನೀವು ಸಂಸದೀಯ ಪಟು ಅಂದುಕೊಂಡಿದ್ದೇನೆ ಮಧ್ಯ ಮಧ್ಯ ಎದ್ದು ನಿಂತು ಮಾತನಾಡಿದರೆ ಇನ್ನೂ ಉತ್ತಮ ಸಂಸದೀಯ ಪಟು ಅನ್ನಿಸಿಕೊಳ್ಳುವುದಿಲ್ಲ. ನನಗಿರುವ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕ ಮಾಡುವುದಿಲ್ಲ ಎಂದರು.
ಈ ವೇಳೆ ಬಿಜೆಪಿ ಶಾಸಕರು, ಮುಖ್ಯಮಂತ್ರಿಗಳೇ ಯಾಕೆ ಪದೇ ಪದೇ ಕಿಂಡಲ್ ಮಾಡುತ್ತೀರಿ? ನೀವು ಈ ಹಿಂದೆ ಅಪ್ಪನಾಣೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದಿಲ್ಲ ಅಂದಿದ್ದಿರಿ. ಅವರು ಮುಖ್ಯಮಂತ್ರಿ ಆಗಲಿಲ್ಲವೇ ಎಂದರು.
ಆರಗ ಜ್ಞಾನೇಂದ್ರ ಮಾತನಾಡಲು ಮುಂದಾದಾಗ, ”ನೀವಂತು ಆಕಾಂಕ್ಷಿ ಅಲ್ಲ, ಅಶೋಕ್ ಹೆಸರೂ ಇದೆ , ಇಲ್ಲವೇ? ” ಎಂದು ಸಿಎಂ ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಯತ್ನಾಳ್, ”ನೀವು ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡಿದ್ದೀರಿ” ಎಂದು ಕಾಲೆಳೆಯುವ ಪ್ರಯತ್ನ ಮಾಡಿದರು.
ಕೆರಳಿದ ಸಿಎಂ ಸಿಎಂ ಸಿದ್ದರಾಮಯ್ಯ, ನನ್ನ ರಾಜಕೀಯ ಜೇವನದಲ್ಲಿ ಎಂದೂ ಅಡ್ಜೆಸ್ಟ್ ಮೆಂಟ್ ರಾಜಕೀಯ ಮಾಡಲಿಲ್ಲ. ನಾನು ವಿಪಕ್ಷದಲ್ಲಿರುವಾಗ ಇಲ್ಲಿ ಸಚಿವರಾದವರು ಕೆಲವರು ಇದ್ದಾರೆ, ಅವರ ಮನೆಗೆ ಹೋಗಿದ್ದೆನಾ ಕೇಳಿ, ನನ್ನ ರಾಜಕೀಯ ಜೀವನದಲ್ಲಿ ಹೊಂದಾಣಿಕೆ ರಾಜಕಾರಣ ಎನ್ನುವ ಪದವೇ ಇಲ್ಲ ಎಂದು ಕಿಡಿ ಕಾರಿದರು.
ಇದಕ್ಕೆ ಉತ್ತರ ನೀಡಿದ ಬಿಜೆಪಿ ಸದಸ್ಯರು, ‘ಮನೆಗೆ ಹೋಗುವುದು ಬೇಡ ಫೋನ್ ನಲ್ಲಿ ಮಾತನಾಡಿದರೆ ಆಗುತ್ತದೆ’ ಎಂದರು.
ಯತ್ನಾಳ್ ಅವರೇ ನೀವು ಎಷ್ಟು ಬಾರಿ ವಿಧಾನಸಭೆಗೆ ಬಂದಿದ್ದೀರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಉತ್ತರಿಸಿದ ಯತ್ನಾಳ್, ಎರಡು ಬಾರಿ ಲೋಕಸಭಾ ಸಂಸದ, ಎರಡು ಬಾರಿ ವಿಧಾನಸಭೆ ಮತ್ತು ಒಂದು ಬಾರಿ ವಿಧಾನ ಪರಿಷತ್ ಸದಸ್ಯನಾಗಿದ್ದೇನೆಎಂದರು.
ಆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ವಿಧಾನಸಭೆಗೆ ೧೯೮೩ ರಲ್ಲಿ ಪ್ರವೇಶ ಮಾಡಿದ್ದೇನೆ, ಯಡಿಯೂರಪ್ಪ, ಆರ್.ವಿ.ದೇಶಪಾಂಡೆ, ಬಿ.ಆರ್.ಪಾಟೀಲ್ ಅವರೊಂದಿಗೆ ಬಂದಿದ್ದೆ. ಎಂದಾದರೂ ಹೊಂದಾಣಿಕೆ ರಾಜಕೀಯ ಮಾಡಿದ್ದೇನೆ ಅನ್ನುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.