ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ಅನಾರೋಗ್ಯ ಪೀಡಿತರು ಮತ್ತು ದುರ್ಬಲರಿಗೆ ಜಾಮೀನು ನೀಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಪಿಎಂಎಲ್ಎಯಂತಹ ಕಾನೂನುಗಳು ಕಠಿಣವಾಗಿದ್ದಾಗಲೂ ನ್ಯಾಯಾಲಯಗಳು ನ್ಯಾಯಿಕ ತತ್ವಗಳ ಪರಿಧಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.
“ಪಿಎಂಎಲ್‌ಎ ಎಷ್ಟೇ ಕಠಿಣವಾಗಿದ್ದರೂ, ನಾವು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕು. ಯಾರಾದರೂ ಅನಾರೋಗ್ಯ ಅಥವಾ ಅಸ್ವಸ್ಥರಾಗಿದ್ದರೆ ಅಂತಹವರಿಗೆ ವೈದ್ಯಕೀಯ ಮಂಡಳಿಯ ವರದಿ ಪರಿಶೀಲಿಸಿ ಜಾಮೀನು ನೀಡಬಹುದು” ಎಂದು ನ್ಯಾಯಾಲಯ ಹೇಳಿದೆ.
ಅಂತೆಯೇ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿದ್ದ ಸೇವಾ ವಿಕಾಸ್ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅಮರ್ ಸಾಧುರಾಮ್ ಮುಲ್ಚಂದಾ ಅವರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.