ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಯನ್ನು (ನೀಟ್ 2024 ) ಮತ್ತೆ ನಡೆಸುವ ಆದೇಶ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಅರ್ಜಿದಾರರು ಆರೋಪಿಸಿದಂತೆ ಪ್ರಶ್ನೆ ಪತ್ರಿಕೆಯ ವ್ಯಾಪಕ ಸೋರಿಕೆಯನ್ನು ಸಾಬೀತುಪಡಿಸಲು ತನ್ನ ಮುಂದೆ ಇರುವ ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.
ಹೀಗಾಗಿ ಈಗಾಗಲೇ ಸರ್ವೋಚ್ಚ ನ್ಯಾಯಾಲಯವು ತೀರ್ಪುಗಳ ಮೂಲಕ ಎತ್ತಿ ಹಿಡಿದಿರುವ ತತ್ವಗಳನ್ನು ಅನ್ವಯಿಸಿದಾಗ ದಾಖಲೆಯಲ್ಲಿ ಸಲ್ಲಿಸಿರುವ ಸಾಕ್ಷ್ಯಗಳನ್ನು ಆಧರಿಸಿ ಇಡೀ ಪರೀಕ್ಷೆಯನ್ನೇ ರದ್ದುಗೊಳಿಸುವ ಆದೇಶ ಸಮರ್ಥನೀಯವಾಗದು ಎಂದು ಪೀಠ ನುಡಿಯಿತು.
ದೇಶದೆಲ್ಲೆಡೆ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿಗೆ ನೀಟ್ ಪದವಿ ಅಂಕಗಳು ಮುಖ್ಯವಾಗುತ್ತವೆ. ಪ್ರಸಕ್ತ ಸಾಲಿನ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಆರೋಪಗಳನ್ನು ಅರ್ಜಿದಾರರು ಮಾಡಿದ್ದರು.
ಹಜಾರಿಬಾಗ್ ಮತ್ತು ಪಾಟ್ನಾದಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆ ಪತ್ರಿಕೆಯ ಸೋರಿಕೆಯ ವಿಚಾರವನ್ನು ಆಕ್ಷೇಪಿಸಲಾಗಿಲ್ಲ. ಆದರೆ, ನೀಟ್ ಪಾವಿತ್ರ್ಯಗೆ ಧಕ್ಕೆ ಒದಗಿದೆ ಎನ್ನುವ ರೀತಿಯಲ್ಲಿ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ಹಿಡಿಯುವ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಅದು ತಿಳಿಸಿದೆ. ಸಿಬಿಐನ ಅಂತಿಮ ವರದಿ ಇನ್ನಷ್ಟೇ ತಲುಪಬೇಕಿದೆ ಎಂದಿರುವ ಪೀಠ ಎನ್‌ಟಿಎ ಸಲ್ಲಿಸಿರುವ ದತ್ತಾಂಶವನ್ನು ಗಮನಿಸಿದರೆ ವ್ಯಾಪಕ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದಿದೆ.
ಅಲ್ಲದೆ ಈ ದತ್ತಾಂಶ ಪರೀಕ್ಷೆಯ ಪಾವಿತ್ರ್ಯತೆಯ ಅಡ್ಡಿಪಡಿಸುವಂತೆ ಪ್ರಶ್ನೆ ಪತ್ರಿಕೆ ವ್ಯವಸ್ಥಿತವಾಗಿ ಸೋರಿಕೆಯಾಗಿದೆ ಎಂಬುದನ್ನು ಹೇಳುವುದಿಲ್ಲ. ಜೊತೆಗೆ ಕಳಂಕಿತ ಅಭ್ಯರ್ಥಿಗಳು ಮತ್ತು ಕಳಂಕ ರಹಿತ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಬಹುದು ಎಂದು ಅದು ಹೇಳಿದೆ.
ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಇದರಿಂದ ಲಾಭವಾಗಿದ್ದರೆ ಅಂತಹ ಯಾವುದೇ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ವಂಚನೆಗೆ ಒಳಗಾದ ಯಾವುದೇ ವಿದ್ಯಾರ್ಥಿ ಅಥವಾ ಫಲಾನುಭವಿ ಪ್ರವೇಶಾತಿ ಮುಂದುವರಿಕೆಯಲ್ಲಿ ಯಾವುದೇ ಸ್ಥಾಪಿತ ಹಕ್ಕನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದಿದೆ.
ಮರು ಪರೀಕ್ಷೆ ನಡೆಸುವುದು 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಅದು ತಿಳಿಸಿದೆ.
ದೇಶದ 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಸಲಾಗಿತ್ತು. ಸಾಗರೋತ್ತರ ದೇಶಗಳಲ್ಲಿ 14 ನಗರಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 1,08,000 ಸೀಟುಗಳಿಗೆ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.