ಮನೆ ರಾಜಕೀಯ ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ

ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಇಲ್ಲ: ಮಧು ಬಂಗಾರಪ್ಪ

0

ಮೈಸೂರು: ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯ ಪುಸ್ತಕದ ಪರಿಷ್ಕರಣೆ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.

Join Our Whatsapp Group

ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು ವ್ಯಾಕರಣ, ಪದಗಳನ್ನಷ್ಟೇ ಬದಲಾವಣೆ ಮಾಡಲಾಗಿದೆ. ಅಂದರೆ, ತಪ್ಪಿದ್ದನ್ನು ಸರಿ ಮಾಡಲಾಗಿದೆ. ಅದಕ್ಕಾಗಿ ಒಂದು ಪುಟ ಬದಲಾವಣೆ ಮಾಡಲಾಗಿದೆ. ಅದು ಬಿಟ್ಟರೆ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದರು.

ಈ ಬಾರಿ ಕಾಂಗ್ರೆಸ್ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬಹುದು ಎಂಬ ವದಂತಿಗಳು ಹಬ್ಬಿದ್ದವು. ಈ ಹಿಂದೆ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿತ್ತು. ಹೀಗಾಗಿ ಹಾಲಿ ಕಾಂಗ್ರೆಸ್ ಸರ್ಕಾರ ಅದನ್ನು ಬದಲಾಯಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದಕ್ಕೆ ಪೂರಕವಾಗಿ, ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರ ಎನ್​​ಇಪಿ ರದ್ದುಪಡಿಸುವ ಬಗ್ಗೆ ಘೋಷಣೆ ಮಾಡಿತ್ತು. ಅದರ ಬದಲಿಗೆ ರಾಜ್ಯದಲ್ಲಿ ಎಸ್​​ಇಪಿ ಅನುಷ್ಠಾನಗೊಳಿಸುವುದಾಗಿಯೂ ಹೇಳಿತ್ತು.

ಶಾಲಾ ಮಕ್ಕಳ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಶೇ 95 ರಷ್ಟು ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ. ಈ ತಿಂಗಳ ಒಳಗೆ ಶೇ 100 ವಿತರಣೆ ಮಾಡುತ್ತೇವೆ ಎಂದರು.

ಎಂಎಲ್​​​​ಸಿ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಾವು ಯಾವುದೇ ಕಾರಣಕ್ಕೂ ಶಿಕ್ಷಕರಿಗೆ ಒತ್ತಡ ಹಾಕುತ್ತಿಲ್ಲ. ಈ ಹಿಂದೆ ಆ ರೀತಿ ಮಾಡುತ್ತಿದ್ದರು. ಶಿಕ್ಷಕರ ಮೇಲೆ ಪ್ರಭಾವ ಬಳಸಿ ಮತ ಪಡೆಯಲು ಮುಂದಾಗುತ್ತಿದ್ದರು. ಯಾರೇ ಶಿಕ್ಷಕರಾಗಲಿ ಶಿಕ್ಷಣದ ಬಗ್ಗೆ ಮಾತ್ರ ಕಾಳಜಿ ವಹಿಸಬೇಕು. ಇಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು. ಒಂದು ವೇಳೆ ರಾಜಕೀಯ ವಿಚಾರಗಳಲ್ಲಿ ಭಾಗಿಯಾದರೆ, ಆ ಬಗ್ಗೆ ಮಾಹಿತಿ ಸಿಕ್ಕಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಮಧು ಬಂಗಾರಪ್ಪ ಎಚ್ಚರಿಕೆ ನೀಡಿದರು.