ಮನೆ ರಾಜ್ಯ ಪಠ್ಯದಿಂದ ಯಾವುದೇ ಸಮಾಜ ಸುಧಾರಕರ ವಿಷಯಗಳನ್ನು ಕೈಬಿಟ್ಟಿಲ್ಲ: ಸಚಿವ ಬಿ.ಸಿ.ನಾಗೇಶ್‌

ಪಠ್ಯದಿಂದ ಯಾವುದೇ ಸಮಾಜ ಸುಧಾರಕರ ವಿಷಯಗಳನ್ನು ಕೈಬಿಟ್ಟಿಲ್ಲ: ಸಚಿವ ಬಿ.ಸಿ.ನಾಗೇಶ್‌

0

ಬೆಂಗಳೂರು (Bengaluru)- ಪಠ್ಯಪುಸ್ತಕ ಪರಿಷ್ಕರಣೆ ಕುರಿತ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (B.C.Nagesh),  ʻಪಠ್ಯದಿಂದ ಯಾವುದೇ ಸಮಾಜ ಸುಧಾರಕರ ವಿಷಯಗಳನ್ನು ಕೈಬಿಟ್ಟಿಲ್ಲʼ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಸುದೀರ್ಘವಾಗಿ ಮಾತನಾಡಿರುವ ಅವರು, ʻಪಠ್ಯದಲ್ಲಿ ನಿಜವಾದ ಇತಿಹಾಸ ಬಿಂಬಿಸಿದ್ದೇವೆ. ಆದರೆ, ಶಿಕ್ಷಣ ಇಲಾಖೆ ಬಗ್ಗೆ ನಿರಂತರವಾಗಿ ಅಪಪ್ರಚಾರ ಮತ್ತು ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಪಠ್ಯದಿಂದ ಯಾವುದೇ ಸಮಾಜ ಸುಧಾರಕರ ವಿಷಯಗಳನ್ನು ಕೈಬಿಟ್ಟಿಲ್ಲ ಎಂದಿದ್ದಾರೆ.

ನಾವು ಸತ್ಯವನ್ನು ಬೋಧಿಸಲು ಪ್ರಯತ್ನಿಸಿದ್ದೇವೆ. ಹೀಗಾಗಿಯೇ ಪಠ್ಯಗಳನ್ನು ಪರಿಷ್ಕರಿಸಿದ್ದೇವೆ. ಇತಿಹಾಸ ಪುಸ್ತಕವು ವಿದ್ಯಾರ್ಥಿಗಳಿಗೆ ಹೆಚ್ಚು ಹೊರೆಯಾಗಿತ್ತು. ಒಂದು ವರ್ಷದಲ್ಲಿ ಸಂಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಹೀಗಾಗಿ, ನಾರಾಯಣ ಗುರು ಅವರ ಪಾಠವನ್ನು ಸಮಾಜ ವಿಜ್ಞಾನದಿಂದ ತೆಗೆದು ಕನ್ನಡ ವಿಷಯಕ್ಕೆ ಸೇರಿಸಲಾಗಿದೆ ಎಂದು ವಿವರಿಸಿದರು.

ಕುವೆಂಪು ಅವರಿಗೆ ನಾವು ಅವಮಾನ ಮಾಡಿಲ್ಲ. ನಾವು ರಾಮಾಯಣ ದರ್ಶನಂ ಸೇರಿಸಿದ್ದೇವೆ. ಹಿಂದಿನ ಸಮಿತಿಯೇ ಕುವೆಂಪು ಅವರಿಗೆ ಅವಮಾನ ಮಾಡಿತ್ತು. ಈ ಸಮಿತಿಯೇ ಮಕ್ಕಳಲ್ಲಿ ಜಾತೀಯ ವಿಷಬೀಜ ಮತ್ತು ದ್ವೇಷ ಬಿತ್ತುವ ಕಾರ್ಯವನ್ನು ಮಾಡಿತ್ತು ಎಂದು ಕಿಡಿಕಾರಿದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ 4ನೇ ತರಗತಿ ಪರಿಸರ ಅಧ್ಯಯನ ಪಠ್ಯ ಪರಿಷ್ಕರಣೆ ಮಾಡಿಲ್ಲ. ಆದರೆ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕುವೆಂಪು ಬಗ್ಗೆ ಎಷ್ಟು ಪಠ್ಯ ಸೇರಿಸಿದ್ದೇವೆ ನೋಡಲಿ. ನಾವು ಕುವೆಂಪು ಬಗ್ಗೆ ಹೆಚ್ಚು ಪಠ್ಯ ಸೇರಿಸಿದ್ದೇವೆ. ಶಿಕ್ಷಣ ಇಲಾಖೆ ಕುವೆಂಪು ಅವರಿಗೆ ಅಪಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಹಿಂದಿನ ಬರಗೂರು ರಾಮಚಂದ್ರಪ್ಪ ಸಮಿತಿಯೇ ಗಾಂಧೀಜಿ, ಅಂಬೇಡ್ಕರ್‌ ಸೇರಿದಂತೆ ಆರು ಪಾಠಗಳನ್ನು ತೆಗೆದು ಹಾಕಿತ್ತು. ಆಗ ಅವರನ್ನು ಯಾರೂ ಪ್ರಶ್ನಿಸಲಿಲ್ಲ. ಮೈಸೂರು ಮಹಾರಾಜರ ಕುರಿತು ಐದು ಪುಟಗಳ ಪಾಠವಿತ್ತು. ಅದನ್ನು ತೆಗೆದುಹಾಕಿ ಕೇವಲ ನಾಲ್ಕು ಸಾಲು ಉಳಿಸಿಕೊಳ್ಳಲಾಗಿತ್ತು. ಮಹಾರಾಜರ ಬದಲು ಟಿಪ್ಪು ಸುಲ್ತಾನ್‌ ಅಧ್ಯಾಯ ಸೇರಿಸಲಾಯಿತು. ಟಿಪ್ಪು ಕುರಿತು ಒಂದು ಪುಟ ಇದ್ದದ್ದು ಆರು ಪುಟಕ್ಕೆ ವಿಸ್ತಾರಗೊಂಡಿತ್ತು. ಒಂದು ಸಮುದಾಯವನ್ನು ಓಲೈಸಲು ಇಂತಹ ಪ್ರಯತ್ನ ಮಾಡಲಾಗಿತ್ತು ಎಂದು ಟೀಕಿಸಿದರು.

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್‌ ಹೋರಾಡಿದ್ದು ನಿಜ. ಆದರೆ, ಬಲವಂತದಿಂದ ಮತಾಂತರ ಮಾಡುತ್ತಿದ್ದ. ಕೊಡಗು, ಕಾಸರಗೋಡಿನಲ್ಲಿ ಜನರನ್ನು ಮತಾಂತರಗೊಳಿಸಿದ್ದ. ಮೈಸೂರು ಮಹಾರಾಜರನ್ನು ಜೈಲಿನಲ್ಲಿರಿಸಿ ಹೈದರ್ ಅಲಿ ಆಡಳಿತ ನಡೆಸಿದ್ದ. ಇಂತಹ ವಿಷಯವನ್ನು ಪಠ್ಯಗಳಲ್ಲಿ ಇದುವರೆಗೆ ಪ್ರಸ್ತಾಪಿಸಿರಲಿಲ್ಲ. ಹೀಗಾಗಿ, ನಾವು ನಿಜವಾದ ಇತಿಹಾಸದ ಚಿತ್ರಣವನ್ನು ವಿವರಿಸಿದ್ದೇವೆ. ನಾವು ಕೆಟ್ಟ ಮತ್ತು ಸೇಡಿನ ರಾಜಕೀಯ ಮಾಡಿಲ್ಲ. ಟಿಪ್ಪು ಸುಲ್ತಾನ್ ಪಠ್ಯ ತೆಗೆದಿಲ್ಲ. ಸತ್ಯವನ್ನು ಅಳವಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಹಿಂದಿನ ಸಮಿತಿಯು ಬ್ರಿಟಿಷರ ವಿರುದ್ಧ ಹೋರಾಡಿದ್ದ ಸಂಗೊಳ್ಳಿ ರಾಯಣ್ಣ, ಅಬ್ಬಕ್ಕ, ಮದಕರಿ ನಾಯಕ ಅವರನ್ನು ಹಿಂದೂ ಎನ್ನುವ ಕಾರಣಕ್ಕೆ ಅವರನ್ನೆಲ್ಲಾ ಕೈಬಿಡಲಾಗಿತ್ತು. ಹೆಜ್ಜೆ, ಹೆಜ್ಜೆಗೂ ಹಿಂದೂಗಳ ವಿಷಯವನ್ನು ತಡೆ ಹಿಡಿಯಲಾಗಿದೆ. ಹಿಂದೂ ಮಹಾಸಾಗರ ಎನ್ನುವುದನ್ನು ಸಹ ಇಂಡಿಯನ್‌ ಓಷನ್ ಎಂದು ಕರೆದರು.

ಬರಗೂರು ರಾಮಚಂದ್ರಪ್ಪ ಸಮಿತಿಯು ರೂಪಿಸಿದ್ದ ಪಠ್ಯಗಳಲ್ಲಿ 19 ಬ್ರಾಹ್ಮಣರ ಲೇಖಕರ ಅಧ್ಯಾಯಗಳಿದ್ದವು. ಸಾಹಿತಿಗಳಲ್ಲೂ ಜಾತಿ ಸೃಷ್ಟಿಸುವುದು ಬೇಡ. ಕುವೆಂಪು ಅವರ ಜಾತಿ ಹುಡುಕುತ್ತೀರಾ? ಬರಗೂರು ರಾಮಚಂದ್ರಪ್ಪ ಸಮಿತಿಯು ಪ್ರೊ. ಸಾ.ಶಿ. ಮರುಳಯ್ಯ, ಸಿದ್ಧಯ್ಯ ಪುರಾಣಿಕ, ಸಂಗಮೇಶ ನಿಡಗುಂದಿ ಮುಂತಾದವರ ಪಠ್ಯಗಳನ್ನು ಕೈಬಿಟ್ಟಿತ್ತಲವೇ? ಒಂದನೇ ತರಗತಿಯಲ್ಲಿದ್ದ ‘ಏರುತಿಹುದು, ಹಾರುತಿಹುದು ನಮ್ಮ ಬಾವುಟ’ ಪಾಠವನ್ನು ಹಿಂದಿನ ಸಮಿತಿ ತೆಗೆದುಹಾಕಿತ್ತು. ಹಾಗಿದ್ದರೆ ಪಾಕಿಸ್ತಾನದ ಬಾವುಟ ಹಾರಿಸಿದರೆ ಇವರಿಗೆ ಖುಷಿಯೇ? ಬೆಂಗಳೂರು ಪರಿಚಯ ಕುರಿತ ಪಠ್ಯದಲ್ಲಿ ಕೆಂಪೇಗೌಡರ ವಿಷಯವನ್ನೇ ತೆಗೆದುಹಾಕಲಾಗಿತ್ತು. ಕೆಂಪೇಗೌಡರ ಬಗ್ಗೆ ಒಂದೇ ಒಂದು ಸಾಲು ಇರಲಿಲ್ಲ. ಜವಾಹರ ಲಾಲ್‌ ನೆಹರೂ ಅವರು ತಮ್ಮ ಮಗಳಿಗೆ ಬರೆದ ಪತ್ರಗಳನ್ನು ನಮ್ಮ ಮಕ್ಕಳು ಏಕೆ ಓದಬೇಕು? ಸಿಂಧೂ ಸಂಸ್ಕೃತಿ ಕುರಿತ ಪಠ್ಯ ತೆಗೆದು ಈ ಜವಾಹರಲಾಲ್‌ ನೆಹರು ಅವರ ಈ ಪಠ್ಯ ಸೇರಿಸಲಾಗಿತ್ತು. ಕಮ್ಯುನಿಸ್ಟ್‌ರಾಗಿರುವ ಜಿ. ರಾಮಕೃಷ್ಣ ಅವರು ಬರೆದಿರುವ ಭಗತ್‌ಸಿಂಗ್‌ ಪಠ್ಯ ಇದೆ. ಯಾರು ಬರವಣಿಗೆ ಮಾಡುತ್ತಾರೆಯೇ ಅವರಿಗೆ ಮಾನ್ಯತೆ ಎಂದರು.

ಪೆರಿಯಾರ್‌ ಅವರ ಕೆಲವು ಸಾಲುಗಳನ್ನು ತೆಗೆದುಹಾಕಿದ್ದೇವೆ. ರಾಮ ನಮಗೆ ಆದರ್ಶವಾಗಬೇಕು. ರಾಮನ ಫೋಟೊಗೆ ಚಪ್ಪಲಿಯಲ್ಲಿ ಹೊಡೆದು, ರಾವಣನನ್ನು ಪೂಜಿಸುವುದನ್ನು ನಮ್ಮ ಮಕ್ಕಳಿಗೆ ಓದಿಸಬೇಕಾ? ರಾಮ ವೈದಿಕ ಸಂಸ್ಕೃತಿ ಪ್ರತಿನಿಧಿಸುತ್ತಾನೆ ಮತ್ತು ರಾವಣ ದ್ರಾವಿಡರ ಸಂಸ್ಕೃತಿ ಬಿಂಬಿಸುತ್ತಾನೆ ಎನ್ನುವುದನ್ನು ಮಕ್ಕಳಿಗೆ ಪಾಠ ಮಾಡಬೇಕೇ? ಇಂತಹ ವಿಷಯಗಳನ್ನು ಸಮರ್ಥಿಸಿಕೊಳ್ಳುವ ಬುದ್ಧಿಜೀವಿಗಳು ಎಂದು ಕರೆಯಿಸಿಕೊಂಡವವರು ರಾಕ್ಷಸರ ವಂಶಸ್ಥರೇ ಎಂದು ಪ್ರಶ್ನಿಸಿದ ಅವರು, ಆರ್‌.ಎಸ್‌.ಎಸ್‌. ಸಂಸ್ಥಾಪಕ ಕೆ.ಬಿ. ಹೆಗಡೇವಾರ್‌ ಅವರ ಭಾಷಣದಲ್ಲಿ ದ್ರೇಶದ್ರೋಹದ ಯಾವುದೇ ಅಂಶಗಳಿಲ್ಲ. ಅವರು ‘ಭಗವಾ ಧ್ವಜ’ ಎಂದು ಬಳಸಿದ್ದರು. ನಾವು ‘ಭಗವಾ’ ಶಬ್ದ ಉಪಯೋಗಿಸಿಲ್ಲ ಎಂದರು.

ಚಕ್ರವರ್ತಿ ಸೂಲಿಬೆಲೆ ಅವರ ಪಾಠವನ್ನು ಸೇರ್ಪಡೆ ಮಾಡಿರುವುದನ್ನು ಸಮರ್ಥಿಸಿಕೊಂಡ ಸಚಿವರು, ಕ್ರಾಂತಿಕಾರಿಗಳಾದ ರಾಜಗುರು ಮತ್ತು ಸುಖದೇವ್‌ ಅವರ ಬಗ್ಗೆ ಬರೆದಿದ್ದಾರೆ. ಹೀಗಾಗಿ, ಹೋರಾಟದ ವಿಷಯಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್‌ ಚಕ್ರತೀರ್ಥ ಅವರು ಐಐಟಿ ಪ್ರೊಫೆಸರ್‌. ಅವರು ಐಐಟಿ ಮತ್ತು ಸಿಇಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಶಿಕ್ಷಣ ತಜ್ಞರು ಎನ್ನುವುದಕ್ಕೆ ಪ್ರಮಾಣಪತ್ರ ಕೊಡುವವರು ಯಾರು? ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಶಾಹಿ ಈದ್ಗಾ ಮಸೀದಿಯಲ್ಲಿ ಅಭಿಷೇಕ, ಪೂಜೆಗೆ ಅನುಮತಿ ಕೋರಿ ಅರ್ಜಿ: ಜುಲೈ 1ಕ್ಕೆ ವಿಚಾರಣೆ
ಮುಂದಿನ ಲೇಖನರೋಹಿತ್‌ ಚಕ್ರತೀರ್ಥ ಸಮಿತಿಗೆ ಪಿಯು ಪಠ್ಯಪುಸ್ತಕ ಪರಿಷ್ಕರಣೆ ಜವಾಬ್ದಾರಿ