ನ್ಯೂಯಾರ್ಕ್ : ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಹಾಗೂ ಡಿಎನ್‌ಎ ರಚನೆಯ ಸಹ-ಆವಿಷ್ಕಾರಕರಾದ ಜೇಮ್ಸ್ ವಾಟ್ಸನ್ (97) ಇಹಲೋಕ ತ್ಯಜಿಸಿದ್ದಾರೆ.
1953ರಲ್ಲಿ ಬ್ರಿಟಿಷ್ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್ ಅವರೊಂದಿಗೆ ಸೇರಿ ಡಿಎನ್‌ಎಯ ಡಬಲ್-ಹಿಲಿಕ್ಸ್ ರಚನೆಯನ್ನು ಇವರು ಗುರುತಿಸಿದ್ದರು. ಇದರಿಂದ ಆಣ್ವಿಕ ಜೀವಶಾಸ್ತ್ರದ ಸಂಶೋಧನೆಗೆ ಹೊಸ ಮೈಲಿಗಲ್ಲು ಸಿಕ್ಕಿತ್ತು. ಜೇಮ್ಸ್ ವಾಟ್ಸನ್ ಅವರ ನಿಧನದ ವಿಷಯವನ್ನು ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿ ದೃಢಪಡಿಸಿದೆ.
ಜೇಮ್ಸ್ ವಾಟ್ಸನ್ ಅವರು 1928ರ ಏಪ್ರಿಲ್‌ನಲ್ಲಿ ಚಿಕಾಗೋದಲ್ಲಿ ಜನಿಸಿದ್ದು, ತಮ್ಮ 15ನೇ ವಯಸ್ಸಿನಲ್ಲಿ ಶಿಕಾಗೋ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿವೇತನ ಪಡೆದು ಸೇರಿದ್ದರು. ಆ ಬಳಿಕ ಡಿಎನ್‌ಎ ರಚನೆ ಕುರಿತು ಸಂಶೋಧನೆಗಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸಿದ್ದು, ಅಲ್ಲಿಯೇ ಫ್ರಾನ್ಸಿಸ್ ಕ್ರಿಕ್ ಅವರ ಭೇಟಿಯೂ ಆಗಿತ್ತು.
ತಮ್ಮ ವೈಜ್ಞಾನಿಕ ಸಾಧನೆಯ ನಂತರ, ವಾಟ್ಸನ್ ಮತ್ತು ಅವರ ಪತ್ನಿ ಎಲಿಜಬೆತ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ದಂಪತಿಯ ಇಬ್ಬರು ಪುತ್ರರ ಪೈಕಿ, ಓರ್ವನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸ್ಕಿಜೋಫ್ರೆನಿಯಾ ಎಂಬ ಮಾನಸಿಕ ಕಾಯಿಲೆ ಕಂಡುಬಂದಿತ್ತು. ಇದರಿಂದಾಗಿಯೇ ವಾಟ್ಸನ್ ಅವರಿಗೆ ಡಿಎನ್‌ಎ ಸಂಶೋಧನೆ ಬಗ್ಗೆ ಮತ್ತಷ್ಟು ಆಸಕ್ತಿ ಮೂಡಿತ್ತು ಎಂದು ಹೇಳಲಾಗಿದೆ.















