ಶಿವಮೊಗ್ಗ: ಈಗಲೂ ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಅಪ್ಪು ಹೆಸರಿನಲ್ಲಿ ಸಮಾಜ ಸೇವೆ ಮಾಡುತ್ತಿದ್ದಾರೆ. ಆದರೆ ಅವರು ಯಾರೂ ಹೇಳಿಕೊಂಡು ತಿರುಗಲ್ಲ ಎಂದು ನಟ ಶಿವರಾಜ್ ಕುಮಾರ್ ಅವರು ಸಚಿವ ವಿ ಸೋಮಣ್ಣ ಅವರಿಗೆ ಶುಕ್ರವಾರ ತಿರುಗೇಟು ನೀಡಿದ್ದಾರೆ.
ನಿನ್ನೆ ವರುಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಶಿವಣ್ಣ ಅವರು ಪ್ರಚಾರ ಮಾಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಹಾಗೂ ಸಚಿವ ಸೋಮಣ್ಣ ಅವರು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಬಗ್ಗೆ ಇಂದು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಶಿವಣ್ಣ, ನಾನೇನು ಚಿಕ್ಕ ಹುಡುಗ ಅಲ್ಲ, ನನಗೆ 61 ವರ್ಷ. ನನ್ನ ವಯಸ್ಸಿಗೆ ಮರ್ಯಾದೆ ಇದೆ ಎಂದು ಹೇಳಿದರು.
ಸಿನಿಮಾದಲ್ಲಿ ಡಿಮ್ಯಾಂಡ್ ಇತ್ತು. ಈಗ ಇಲ್ಲೂ ಶುರುವಾಗಿದೆ. ಬೇರೆ ಪಕ್ಷದವರು ಕರೆದರೂ ಹೋಗುತ್ತೇನೆ, ಯಾರು ಕರೆದಿಲ್ಲ ಎಂದರು.
ವರುಣಾದಲ್ಲಿ ನಿನ್ನೆ ರ್ಯಾಲಿ ಚೆನ್ನಾಗಿ ಆಗಿತ್ತು. ಇವತ್ತು ಶಿರಸಿಗೆ ಹೋಗುತ್ತಿದ್ದೇನೆ. ನಾಳೆ ಜಗದೀಶ್ ಶೆಟ್ಟರ್ ಪರವಾಗಿ ಹೋಗುತ್ತಿದ್ದೇನೆ. ಹಾಗೆಯೇ ಬೀದರ್, ಬಸವ ಕಲ್ಯಾಣ, ಮುಂಡಗೋಡು, ಮಂಗಳೂರಿಗೆ ಹೋಗುತ್ತಿದ್ದೇನೆ ಎಂದರು.
ಸೋಮಣ್ಣ ಕೂಡ ಆಪ್ತರು, ಪ್ರತಾಪ್ ಸಿಂಹ ಕೂಡ ಪರಿಚಯಸ್ತರು. ಅವರ ಬಗ್ಗೆ ಗೌರವವಿದೆ. ನಾನೇನು ಹೇಳಲ್ಲ. ಕಾಂಗ್ರೆಸ್ ಬಗ್ಗೆ ಕೂಡ ನಾನು ಮಾತನಾಡುತ್ತಿಲ್ಲ. ಕೆಲ ಅಭ್ಯರ್ಥಿಗಳ ಪರ ಹೋಗುತ್ತಿದ್ದೇನೆ. ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಎಂದರು.
ರಾಹುಲ್ ಗಾಂಧಿಯವರು ನನಗೆ ಇಷ್ಟವಾಗಿದ್ದರು. ಅವರು ಭೇಟಿ ಮಾಡಿದ್ದೆ. ಅವರು ಭಾರತ್ ಜೋಡೋ ಯಾತ್ರೆ ಇಂಪ್ರೆಸ್ ಅಗಿತ್ತು. ಅವರ ಫಿಟ್ನೆಸ್ ನೋಡಿ ಇಂಪ್ರೆಸ್ ಆಗಿದ್ದೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಸುದೀಪ್ ಕೂಡ ಹೋಗುತ್ತಿದ್ದಾರೆ. ಹಾಗಂತ ನಾಳೆ ಸಿಕ್ಕರೆ ನಾವು ಮಾತಾಡಲ್ವಾ? ಹಿ ಇಸ್ ಮೈ ಫ್ರೆಂಡ್, ಬ್ರದರ್.. ಫ್ಯಾಮಿಲಿ ರೀತಿ. ಇಲ್ಲಿ ವಾರ್ ಏನೂ ಇಲ್ಲ. ಜಸ್ಟ್ ಕಾಂಪಿಟೆಶನ್ ಅಷ್ಟೇ. ಅದು ಎಲ್ಲಾ ಕಡೇನೂ ಇರುತ್ತೆ ಎಂದರು.
ಚುನಾವಣಾ ಪ್ರಚಾರಕ್ಕೆ ಯಾರು ಪ್ರಭಾವ ಬೀರಿದ್ದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮಧುಗೋಸ್ಕರ ಪ್ರಚಾರಕ್ಕೆ ಬಂದೆ. ನನಗೆ ಯಾರು ವಿರೋಧಿಗಳಿಲ್ಲ, ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಎಂದರು.