ಮನೆ ಕಾನೂನು ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ:  ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್

ವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ:  ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್

0

ಬೆಂಗಳೂರು: ಎಸಿಬಿಯಲ್ಲಿನ ಅಕ್ರಮಗಳನ್ನು ಪ್ರಶ್ನಿಸಿರುವುದಕ್ಕೆ ನನಗೇ ವರ್ಗಾವಣೆ ಬೆದರಿಕೆ ಹಾಕಲಾಗಿದೆ.  ಆದರೆ ಸಮಾಜದ ಹಿತಕ್ಕಾಗಿ ನಾನು ಇವನ್ನೆಲ್ಲಾ ಎದುರಿಸಲು ಸಿದ್ದವಾಗಿದ್ದೇನೆ, ಅವರಿಗೆ ಸಾಧ್ಯವಿದ್ದರೆ ವರ್ಗ ಮಾಡಿಸಲಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಸವಾಲು ಹಾಕಿದ್ದಾರೆ.

ಹೈಕೋರ್ಟ್​ನಲ್ಲಿ ಸೋಮವಾರ ಲಂಚ ಪ್ರಕರಣದ ಆರೋಪದಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಪಿ ಎಸ್ ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿರುದ್ಧದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಸಭಾಂಗಣದಲ್ಲೇ ತಮಗೆ ಪರೋಕ್ಷವಾಗಿ ವರ್ಗಾವಣೆ ಬೆದರಿಕೆ ಬಂದಿರುವ ವಿಚಾರ ತಿಳಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಚಾರಣೆ ಆರಂಭವಾಗುತ್ತಿದ್ದಂತೆ ಎಸಿಬಿ ಪರ ವಕೀಲ ಪಿ ಎನ್‌ ಮನಮೋಹನ್‌ , ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಭಾಗೀಯ ಪೀಠದ ಮುಂದಿದ್ದು, ಈಗಾಗಲೇ ಆ ಪೀಠಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.

ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠವು ವಿಭಾಗೀಯ ಪೀಠಕ್ಕೆ ವರದಿ ಸಲ್ಲಿಸಿದ ಮಾತ್ರಕ್ಕೆ ಇಲ್ಲಿ ವರದಿ ನೀಡಬಾರದು ಎಂದರ್ಥವೇ? ಕಳೆದ ವಿಚಾರಣೆ ವೇಳೆ ವರದಿ ಸಲ್ಲಿಸುವುದಾಗಿ ನೀವೇ ಭರವಸೆ ನೀಡಿದ್ದಿರಿ. ಇದೀಗ ಬಂದು ಬೇರೆ ರೀತಿ ಹೇಳುತ್ತಿದ್ದೀರಿ. ನೀವು ಏನನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ?” ಎಂದು ಎಸಿಬಿ ಪರ ವಕೀಲರನ್ನು ತೀಕ್ಷ್ಣವಾಗಿ ಪ್ರಶ್ನಿಸಿತು.

ನೀವು ಸರ್ಕಾರದ ಪರ ವಕೀಲರು. ಆದರೆ ನಿಮಗೆ ವೇತನ ಕೊಡುತ್ತಿರುವುದು ಜನರ ತೆರಿಗೆ ಹಣದಿಂದ. ಹೀಗಾಗಿ ಸರ್ಕಾರಕ್ಕಿಂತ ಅನ್ನ ಕೊಡುತ್ತಿರುವ ಜನರ ಪರವಾಗಿ ಕೆಲಸ ಮಾಡಿ.  ಕರಿ ಕೋಟು ಇರುವುದು ಭ್ರಷ್ಟರ ರಕ್ಷಣೆಗಲ್ಲ. ನೋಬೆಲ್ ಪ್ರೊಫೆಷನ್ ಗೆ ತಕ್ಕಂತೆ ಕೆಲಸ ಮಾಡಿ  ಎಂದಿದ್ದಾರೆ.

ಈ ಪ್ರಕರಣದಲ್ಲಿ ನನಗೆ ವೈಯಕ್ತಿಕವಾಗಿ ಆಗಬೇಕಾದದ್ದು ಏನೂ ಇಲ್ಲ. ಸಮಾಜದ ಹಿತಕ್ಕಾಗಿ ಪ್ರಕರಣದಲ್ಲಿ ವಿವರ ಕೇಳಿದ್ದೆ. ವಿಭಾಗೀಯ ಪೀಠಕ್ಕೆ ಸಲ್ಲಿಸಿದ ದಾಖಲೆಗಳನ್ನು ಇಲ್ಲಿಗೇಕೆ ಸಲ್ಲಿಸಲಿಲ್ಲ. ನನಗೆ ಯಾರನ್ನೂ ಓಲೈಸುವ ಅಗತ್ಯವಿಲ್ಲ. ಆದೇಶದಲ್ಲಿ ಎಲ್ಲವನ್ನೂ ದಾಖಲಿಸಿ ಇಡುತ್ತೇನೆ. ಭ್ರಷ್ಟಾಚಾರ ಎಂಬುದು ಕ್ಯಾನ್ಸರ್. ನಾಲ್ಕನೇ ಹಂತಕ್ಕೆ ತಲುಪುವ ಮುನ್ನ ತಡೆಯಬೇಕು, ಹೈಕೋರ್ಟ್ ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಮೇಲಿನ ದಾಳಿ. ಬೆಕ್ಕಿಗೆ ಗಂಟೆ ಕಟ್ಟಲು ನಾನು ಸಿದ್ಧನಿದ್ದೇನೆ ಎಂದು ನ್ಯಾಯಮೂರ್ತಿಗಳು ಆಕ್ರೋಶದಿಂದ ನುಡಿದರು.

ಭ್ರಷ್ಟಚಾರದ ಕೂಪವಾದ ಎಸಿಬಿ

ರಾಜ್ಯಕ್ಕೆ ಅವಮಾನವಾಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೇ ದರ್ಬಾರ್ ನಡೆಸಲು ಬಿಡಲಾಗಿದೆ. ಆ ಮೂಲಕ ಸರ್ಕಾರವೂ ಅಪರಾಧದ ಭಾಗವಾಗಿರುವಂತಿದೆ.  ಭ್ರಷ್ಟಾಚಾರಿಗಳ ಹೆಡೆಮುರಿ ಕಟ್ಟಬೇಕಿದ್ದ ಭ್ರಷ್ಟಾಚಾರ ನಿಗ್ರಹ ದಳವೇ (ಎಸಿಬಿ) ಭ್ರಷ್ಟರ ಕೂಪವಾಗಿದೆ. ಎಸಿಬಿ ಕಚೇರಿಗಳೇ ಕಲೆಕ್ಷನ್ ಸೆಂಟರ್‌ಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುದ್ದೆ ಹೋದರು ಚಿಂತಿಸುವುದಿಲ್ಲ:

ಯರ್ಯಾರ್ದೋ ಕಾಲು ಹಿಡಿದು ನಾನು ಜಡ್ಜ್ ಆಗಿ ಬಂದಿಲ್ಲ. ನ್ಯಾಯಮೂರ್ತಿ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ನನ್ನ ತಂದೆ ನನಗಾಗಿ ಮಾಡಿರುವ ಭೂಮಿ ಇದೆ. ಅದನ್ನು ಉಳುಮೆ ಮಾಡಿಕೊಂಡು ಬದುಕಲೂ ಸಿದ್ಧನಿದ್ದೇನೆ. ನನಗೆ 500 ರೂಪಾಯಿಯಲ್ಲಿ ಜೀವನ ನಡೆಸುವುದೂ ಗೊತ್ತು, 5 ಸಾವಿರ ರೂಪಾಯಿಯಲ್ಲಿ ಬದುಕುವುದಕ್ಕೂ ಗೊತ್ತು. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ, ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ದನಾಗಿಲ್ಲ. ಸಂವಿಧಾನಕ್ಕೆ ಮಾತ್ರ ನಾನು ಬದ್ಧನಾಗಿದ್ದೇನೆ ಎಂದು ಕಟುವಾಗಿ ನುಡಿದರು.

ಭ್ರಷ್ಟಚಾರ ಕ್ಯಾನ್ಸರ್ ನಂತಾಗಿದೆ

ʼಬಿʼ ರಿಪೋರ್ಟ್‌ ಕುರಿತು ಮಾಹಿತಿ ಒದಗಿಸದ ಹಿನ್ನೆಲೆಯಲ್ಲಿ ಎಸಿಬಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪೀಠವು “ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನು ರಕ್ಷಿಸುತ್ತಿದ್ದೀರಾ? ಭ್ರಷ್ಟಾಚಾರ ಕ್ಯಾನ್ಸರ್‌ನಂತಾಗಿದೆ. ಅದನ್ನು ಮೊದಲ ಅಥವಾ ಎರಡನೇ ಹಂತದಲ್ಲಿರುವಾಗಲೇ ಗುಣಪಡಿಸಬೇಕು. 4ನೇ ಹಂತಕ್ಕೆ ಹೋಗಲು ಬಿಡಬಾರದು. ಆದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು. ಭ್ರಷ್ಟಾಚಾರಿಗಳ ವಿರುದ್ಧ ಶೋಧನಾ ವಾರಂಟ್ ಹೊರಡಿಸಿ, ನಂತರ ಅದನ್ನು ಮುಂದಿಟ್ಟುಕೊಂಡು ವಸೂಲಿ ಮಾಡಲಾಗುತ್ತಿದೆ. ಆದರೆ, ಶೋಧನಾ ವಾರಂಟ್ ಅನ್ನು ಕಾರ್ಯರೂಪಕ್ಕೆ ತರುವುದೇ ಇಲ್ಲ. ರೆಡ್ ಹ್ಯಾಂಡೆಡ್ ಆಗಿ ಸಿಕ್ಕಬಿದ್ದವರಿಗೂ ಬಿ ರಿಪೋರ್ಟ್ ಹಾಕಲಾಗಿದೆ. ದಾಳಿ ವೇಳೆ ಲಂಚದ ಹಣ ಸಿಕ್ಕ ಪ್ರಕರಣಗಳಲ್ಲೂ ವಿಚಾರಣೆ ನಡೆಸದೆ ಬಿ ವರದಿ ಹಾಕಲು ಹೇಗೆ ಸಾಧ್ಯ ಎಂದು ಪೀಠ ಪ್ರಶ್ನಿಸಿತು.

`ಬಿ’ ವರದಿಗಳ ಮಾಹಿತಿ ನೀಡಲು ಹಿಂಜರಿಕೆಯೇಕೆ ?

ಎಸಿಬಿ ಸಲ್ಲಿಸಿರುವ ಬಿ ವರದಿಗಳ ಮಾಹಿತಿ ನೀಡಿಲ್ಲವೇಕೆ, ಮಾಹಿತಿ ನೀಡಲು ಏಕೆ ಹಿಂಜರಿಯುತ್ತಿದ್ದೀರಿ. ಎಸಿಬಿ ಎಡಿಜಿಪಿಯ ಸರ್ವೀಸ್ ರೆಕಾರ್ಡ್ ಏಕೆ ಹಾಜರುಪಡಿಸಿಲ್ಲ. ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ವ್ಯಕ್ತಿ ಗುತ್ತಿಗೆ ನೌಕರನಾಗಿದ್ದಾನೆ. ಆತನನ್ನು ಯಾರು ನೇಮಕ ಮಾಡಿದ್ದು ಎಂಬ ಬಗ್ಗೆ ವಿವರ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ ಪೀಠವು ಎಸಿಬಿ ಎಡಿಜಿಪಿ ಸರ್ವೀಸ್ ರೆಕಾರ್ಡ್ ಹಾಜರುಪಡಿಸಲು ಡಿಪಿಎಎಆರ್ ಕಾರ್ಯದರ್ಶಿ ಮಧ್ಯಾಹ್ನ 2.30ಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.ಮಧ್ಯಾಹ್ನ ವಿಚಾರಣೆಗೆ ಹಾಜರಾದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಎಸಿಬಿ ಎಡಿಜಿಪಿಯ ವಿವರ ನೀಡಿ, ಸಂಜೆಯೊಳಗೆ ಸರ್ವೀಸ್ ರೆಕಾರ್ಡ್ ನೀಡುವುದಾಗಿ ತಿಳಿಸಿದರು.

ಡಿಸಿ ಕಚೇರಿಯ ಗುತ್ತಿಗೆ ನೌಕರನ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಏನಿದೆ? ಇಲ್ಲಿ ಏನು ನಡೆಯುತ್ತಿದೆ ಅಡ್ವೊಕೇಟ್ ಜನರಲ್ ಅವರೇ. ದುಡ್ಡು ವಸೂಲಿ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಫೋನ್‌ನಲ್ಲಿ ನಡೆಸಿರುವ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿ ಒಪ್ಪಿಗೆ ಇಲ್ಲದೆ ಆತ 5 ಲಕ್ಷ ರೂಪಾಯಿ ಲಂಚ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಅಡ್ವೊಕೇಟ್‌ ಜನರಲ್‌ ಅವರು ಎಸಿಬಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸುತ್ತೇವೆ. ಬಿ ವರದಿಗಳ ಕುರಿತ ಸಂಪೂರ್ಣ ಮಾಹಿತಿ ನೀಡುತ್ತೇವೆ. ನ್ಯಾಯಾಲಯದ ಆದೇಶವನ್ನು ಸರ್ಕಾರ ಚಾಚೂ ತಪ್ಪದೆ ಪಾಲಿಸಲಿದೆ. ನನ್ನ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಳ್ಳಬಹುದು ಎಂದು ಪೀಠಕ್ಕೆ ಭರವಸೆ ನೀಡಿದರು.

ಜುಲೈ7 ರೊಳಗೆ ವರದಿಗಳ ಮಾಹಿತಿ ಸಲ್ಲಿಸಿ

ಮಾಹಿತಿ ದಾಖಲಿಸಿಕೊಂಡ ಪೀಠವು ಎಸಿಬಿ ಸ್ಥಾಪನೆಗೊಂಡ ದಿನದಿಂದ ಈವರೆಗೆ ಸಲ್ಲಿಸಿರುವ ಬಿ ರಿಪೋರ್ಟ್‌ಗಳೆಷ್ಟು, ಎಷ್ಟು ವರದಿಗಳು ಅಂಗೀಕೃತಗೊಂಡಿವೆ ಎಂಬ ಮಾಹಿತಿಯನ್ನು ಜುಲೈ 7ರೊಳಗೆ ಸಲ್ಲಿಸಬೇಕು ಎಂದು ಎಸಿಬಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು. ಅರ್ಜಿ ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿದಾಗ ಸರ್ಕಾರಿ ವಕೀಲರು, ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಪ್ರಕರಣವೂ ಅಂದೇ ವಿಚಾರಣೆಗೆ ನಿಗದಿಯಾಗಿದೆ ಎಂದು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಎರಡೂ ಅರ್ಜಿಗಳು ಒಟ್ಟಿಗೇ ವಿಚಾರಣೆಗೆ ಬರಲಿ ಬಿಡಿ. ಆ ಪ್ರಕರಣದಲ್ಲೂ ಒಎಂಆರ್ ಶೀಟ್ ಮತ್ತು ಎಫ್‌ಎಸ್‌ಎಲ್ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಆ ವರದಿಗಳು ಸಲ್ಲಿಕೆಯಾಗಲಿ ಎಂದರು.

ಹಣ ಹೂಡಿಕೆ ಮಾಡಿ ಹುದ್ದೆ ಪಡೆದವರು ಹಣ ವಸೂಲಿ ಜನರ ರಕ್ತ ಹೀರುತ್ತಾರೆ

ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಇಂದು ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಪೀಠವು 545 ಪಿಐಎಸ್ ಹುದ್ದೆಗಳಲ್ಲಿ ಕನಿಷ್ಠ 400 ಹುದ್ದೆಗಳು ಮಾರಾಟವಾಗಿವೆ. ಇವರೆಲ್ಲ ಪಿಎಸ್‌ಐಗಳಾಗಿ ಏನು ಮಾಡುತ್ತಾರೆ. ಹಣ ಹೂಡಿಕೆ ಮಾಡಿ ಹುದ್ದೆ ಪಡೆದವರು ಮುಂದೆ ಆ ಹಣ ವಸೂಲಿ ಮಾಡಲು ಜನರ ರಕ್ತ ಹೀರುತ್ತಾರಷ್ಟೆ ಎಂದು ನುಡಿದರು.

ಬಿ ರಿಪೋರ್ಟ್ ಹಾಕಿದ್ದನ್ನು ಪ್ರಶ್ನಿಸಿದ ನ್ಯಾಯಾಧೀಶರ ವರ್ಗಾವಣೆ:

ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು, ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಮತ್ತು 6 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದೆ. ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರನ್ನೇ ವರ್ಗಾಯಿಸಲಾಗಿದೆ. ಬೇರೆ ನ್ಯಾಯಾಧೀಶರು ಬಂದ ನಂತರ ಬಿ ರಿಪೋರ್ಟ್ ಅಂಗೀಕರಿಸಲಾಗಿದೆ. ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದಾದರೂ ಹೇಗೆ, ವರ್ಗಾವಣೆ ಬೆದರಿಕೆ ಬಗ್ಗೆ ಹೇಳಿದವರ ಹೆಸರನ್ನೂ ಬಹಿರಂಗಪಡಿಸುತ್ತೇನೆ. ಎಸಿಬಿಯ ಹಾಲಿ ಎಡಿಜಿಪಿ ಬಂದ ನಂತರ ಎಷ್ಟು ಬಿ ರಿಪೋರ್ಟ್ ಆಗಿದೆ. ಐಎಎಸ್, ಐಪಿಎಸ್ ಲಾಬಿಗೆ ಒಳಗಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳಿಗೇ ದರ್ಬಾರ್ ನಡೆಸಲು ಬಿಡಲಾಗಿದೆ. ಆ ಮೂಲಕ ಸರ್ಕಾರವೂ ಅಪರಾಧದ ಭಾಗವಾಗಿರುವಂತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.