ಬೆಂಗಳೂರು : ಮಧ್ಯೆ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಪುಂಡರಿಗೆ ತಕ್ಕ ಶಾಸ್ತಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ. ಬೇಕಾಬಿಟ್ಟಿ ಡ್ರೈವಿಗ್, ವೀಲಿಂಗ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಲಸೆನ್ಸ್ ರದ್ದುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿದು ಬಂದಿದೆ.
ಟ್ರಾಫಿಕ್ ನಗರಿ ಬೆಂಗಳೂರಿನಲ್ಲಿ ನಿರಂತರವಾಗಿ ಗಾಡಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಾಹನ ದಟ್ಟಣೆಯೂ ಹೆಚ್ಚಾಗಿದೆ. ಈ ಮಧ್ಯೆ ಟ್ರಾಫಿಕ್ ನಿಯಮ ಉಲ್ಲಂಘನೆಯ ಪ್ರಕರಣಗಳೂ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಪೊಲೀಸರು ಇನ್ನಿಲ್ಲದ ಹರಸಾಹನ ಮಾಡುತ್ತಿದ್ದಾರೆ. ದಂಡಂ ದಶಗುಣಂ ಎಂಬಂತೆ ದಂಡ ಪ್ರಯೋಗವನ್ನೂ ಮಾಡಿದ್ದಾಗಿದೆ.
ಆದರೂ ಟ್ರಾಫಿಕ್ ರೂಲ್ಸ್ಗೆ ಜನ ಕೇರ್ ಮಾಡದೇ ಉಲ್ಲಂಘನೆ ಮಾಡುತ್ತಲೇ ಇದ್ದು, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ತಕ್ಕ ಪಾಠ ಕಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದರಲ್ಲೂ ವ್ಹೀಲಿಂಗ್ ಮಾಡುವವರನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂಬ ಸಾರ್ವಜನಿಕರು ಕೂಗಿನ ಬೆನ್ನಲ್ಲೇ ಇದೀಗ ಜಿಲ್ಲಾಡಳಿತ ಲೈಸೆನ್ಸ್ ರದ್ದುಗೊಳಿಸುವ ಮಹತ್ವದ ನಿರ್ಧಾರ ಮಾಡಿದೆ.
ಟ್ರಾಫಿಕ್ ನಿಯಮಗಳನ್ನು ಪದೇಪದೇ ಉಲ್ಲಂಘಿಸುವವರ ವಿರುದ್ಧ ಕೇಸ್ ದಾಖಲಿಸುವುದರ ಜೊತೆಗೆ ಅವರ ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸುವಂತೆ ಪೊಲೀಸರಿಗೆ ಬೆಂಗಳೂರು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಬೆಂಗಳೂರು ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೂಲ್ಸ್ ಬ್ರೇಕ್ ಮಾಡುವವರ ವಾಹನ ಚಾಲನಾ ಪರವಾನಾಗಿ ರದ್ದುಗೊಳಿಸುವಂತೆ ಸೂಚಿಸಿದೆ.
ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ಹಾಗೂ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವರ ವಿರುದ್ಧ ಪ್ರಕರಣ ದಾಖಲಿಸುವುದಲ್ಲದೆ ಅವರ ವಾಹನ ಚಾಲನಾ ಪರವಾನಗಿಯನ್ನು ಕಾಯಂ ರದ್ದುಗೊಳಿಸಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ ವೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ ವಾಹನ ನೋಂದಣಿ (ಆರ್ಸಿ), ಡಿಎಲ್ ಶಾಶ್ವತವಾಗಿ ರದ್ದು ಮಾಡಿ, ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ, ನಗರದಲ್ಲಿ ಮಕ್ಕಳು ರಸ್ತೆ ದಾಟುವಾಗ ಸಂಭವಿಸುವ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲಾ ಶಾಲೆಗಳಲ್ಲಿಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ರಸ್ತೆ ಅಪಘಾತ ಕುರಿತು ಜಾಗೃತಿ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.















