ಮನೆ ಸಾಹಿತ್ಯ ಅ. ೨೮ ರಂದು ಸುತ್ತೂರು ಮಠದಲ್ಲಿ ಸಿ.ಎಸ್. ಕೇಶವಚಂದ್ರ ಅವರಿಂದ ಕೊಳಲು ವಾದನ

ಅ. ೨೮ ರಂದು ಸುತ್ತೂರು ಮಠದಲ್ಲಿ ಸಿ.ಎಸ್. ಕೇಶವಚಂದ್ರ ಅವರಿಂದ ಕೊಳಲು ವಾದನ

0

ಮೈಸೂರು: ಸುತ್ತೂರು ಮಠದಲ್ಲಿ ಅ. ೨೮ ರಂದು ಶನಿವಾರ ಸಂಜೆ ೬.೦೦ ಗಂಟೆಗೆ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಬೆಳದಿಂಗಳ ಸಂಗೀತ- ೨೬೦ರ ಅಂಗವಾಗಿ ವಿದ್ವಾನ್ ಸಿ.ಎಸ್. ಕೇಶವಚಂದ್ರ ಕೊಳಲು ವಾದನವನ್ನು ಏರ್ಪಡಿಸಲಾಗಿದೆ.

ವಿದ್ವಾನ್ ಸಿ.ಎಸ್. ಕೇಶವಚಂದ್ರರವರು ಹೆಸರಾಂತ ಚಿಲಕುಂದ ಸಂಗೀತ ಕುಟುಂಬಕ್ಕೆ ಸೇರಿದವರು.

ಆರನೇ ವಯಸ್ಸಿನಿಂದಲೇ ಅವರ ತಂದೆ ವಿದ್ವಾನ್ ಡಾ. ಸಿ.ಎ. ಶ್ರೀಧರ್‌ ರವರಲ್ಲಿ ಗಾಯನ ಹಾಗು ವೇಣುವಾದನವನ್ನು ಕಲಿಯತೊಡಗಿದರು. ೧೨ನೇ ವಯಸ್ಸಿನಲ್ಲೇ ಮೊದಲ ವೇಣುವಾದನ ಕಚೇರಿ ನೀಡಿದರು. ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿ ಸೇರಿದಂತೆ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ಗಳನ್ನು ನೀಡಿರುತ್ತಾರೆ. ಇವರಿಗೆ ೨೦೧೮ನೇ ಸಾಲಿನ ಆಕಾಶವಾಣಿ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಐಸಿಎಂಡಿಎ ಯವರಿಂದ ಸಂಗೀತ ಶಿರೋಮಣಿ ಪ್ರಶಸ್ತಿ ಹಾಗೂ ಚಿನ್ನದ ಪದಕ, ಬೆಂಗಳೂರಿನ ರಾಮ ಸೇವಾ ಮಂಡಳಿಯವರಿಂದ ಚಂಪಾ ನಾರಾಯಣನ್ ಪ್ರಶಸ್ತಿಗಳು ಸಂದಿರುತ್ತವೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಇವರು ಪ್ರಸ್ತುತ ಮೈಸೂರಿನ ಜೆ.ಕೆ. ಟೈರ್‍ಸ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವಯೊಲಿನ್ ಸಹಕಾರ ನೀಡುತ್ತಿರುವ ವಿದುಷಿ ಸಿ.ವಿ. ಶ್ರುತಿಯವರು ಸಂಗೀತದ ಕೌಟುಂಬಿಕ ಹಿನ್ನೆಲೆಯುಳ್ಳವರು. ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ತಾತ ಶ್ರೀ ಸಿ.ಎಸ್. ನಾಗರಾಜ್ ಅವರಿಂದ ಕಲಿತರು. ಬಳಿಕ ೧೦ನೆಯ ವರ್ಷದಿಂದ ಮೈಸೂರಿನ ಖ್ಯಾತ ವಯೊಲಿನ್ ವಿದ್ವಾಂಸರಾದ ಎಚ್.ಕೆ. ನರಸಿಂಹಮೂರ್ತಿಯವರ ಬಳಿ ಶಿಷ್ಯವೃತ್ತಿ ಕೈಗೊಂಡರು. ಪ್ರಸ್ತುತ ಅಕ್ಕರೈ ಸಹೋದರಿಯವರಲ್ಲಿ ಉನ್ನತ ಸಂಗೀತ ಶಿಕ್ಷಣ ಮುಂದುವರಿಕೆ. ಗಾನಭಾರತಿ ಸಂಸ್ಥೆಯು ನಡೆಸಿದ ನಾದಕಿಶೋರೋತ್ಸವದಲ್ಲಿ (೨೦೧೯) ಅತ್ಯುತ್ತಮ ಪಕ್ಕವಾದ್ಯ ಸಾಥಿ ಪ್ರಶಸ್ತಿ; ನಾದಮಯ ಸಂಸ್ಥೆಯಿಂದ (೨೦೨೨) ವಯೊಲಿನ್ ಸೋಲೋ ಮತ್ತು ಪಕ್ಕವಾದ್ಯ ಎರಡರಲ್ಲೂ ಅತ್ಯುತ್ತಮ ಸಾಧನೆಗಾಗಿ ಪ್ರಶಸ್ತಿ ಬಂದಿವೆ. ಮೈಸೂರು ಆಕಾಶವಾಣಿಯ ಎ ಶ್ರೇಣಿ ಕಲಾವಿದರು.

ಮೃದಂಗ ಸಹವಾದನ ನೀಡಲಿರುವ ವಿದ್ವಾನ್ ನರೇಂದ್ರ ಶರ್ಮರವರು ಸಂಗೀತದ ಕೌಟುಂಬಿಕ ಹಿನ್ನೆಲೆಯುಳ್ಳವರು. ತಾಯಿ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತಗಾರರು; ತಂದೆ ಶಾಸ್ತ್ರೀಯ ಸಂಗೀತದ ಅಭಿಮಾನಿ. ಇವರು ಮೃದಂಗ ವಾದನದ ಪ್ರಾಥಮಿಕ ಶಿಕ್ಷಣವನ್ನು ವಿದ್ವಾನ್ ಕಾಂಚನ ವಿಷ್ಣುಮೂರ್ತಿಯವರ ಬಳಿ, ಅನಂತರ ಮೃದಂಗ ದಿಗ್ಗಜ ಶ್ರೀ ಪಾಲ್ಘಾಟ್ ಮಣಿ ಅಯ್ಯರ್‌ರವರ ಮಗ ವಿದ್ವಾನ್ ಪಾಲ್ಘಾಟ್ ಟಿ.ಆರ್. ರಾಜಮಣಿಯವರಲ್ಲಿ ಉನ್ನತ ಶಿಕ್ಷಣ ಪಡೆದರು. ಶಿವಮೊಗ್ಗ, ಬೆಂಗಳೂರು ಮತ್ತು ಕರ್ನಾಟಕದ ವಿವಿಧೆಡೆಗಳಲ್ಲಿ ವಾದನ ಪ್ರಸ್ತುತಿ ನೀಡಿದ್ದಾರೆ. ಶೃಂಗೇರಿ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗಿರುವರು. ಕರ್ನಾಟಕ ಸಂಗೀತ ಕ್ಷೇತ್ರದ ಹಲವಾರು ಹಿರಿಯರಿಗೆ ಪಕ್ಕವಾದ್ಯ ನುಡಿಸಿರುವ ಖ್ಯಾತಿ. ೧೯೯೬ರಿಂದ ಅಮೆರಿಕದ ನ್ಯೂಜೆರ್ಸಿಯಲ್ಲಿದ್ದು, ಅಮೆರಿಕದಾದ್ಯಂತ ತಮ್ಮ ವಿದ್ವತ್ತನ್ನು ಪ್ರದರ್ಶಿಸಿತ್ತಾರೆ. ಸುಮಾರು ೧೬ ವರ್ಷಗಳ ಬಳಿಕ ಭಾರತಕ್ಕೆ ಹಿಂದಿರುಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಆಸಕ್ತರಿಗೆ ಮೃದಂಗ ಶಿಕ್ಷಣ, ಸೇವಾಕಾರ್ಯಗಳಲ್ಲಿ ಆಸ್ಥೆ ಪ್ರಸ್ತುತ ಇವರ ಕಾರ್ಯಕ್ಷೇತ್ರವಾಗಿವೆ. ಘಟಂ ವಾದನದಲ್ಲಿ ಸಹಕರಿಸುತ್ತಿರುವ ವಿದ್ವಾನ್ ಎಂ.ಆರ್. ಮಂಜುನಾಥ್‌ರವರು ಆಸ್ಥಾನ ವಿದ್ವಾನ್, ಕರ್ನಾಟಕ ಕಲಾಶ್ರೀ, ತಾಳವಾದ್ಯ ವಿದ್ಯಾವಾರಿಧಿ ಶ್ರೀ ಎಂ.ಆರ್. ರಾಜಪ್ಪನವರ ಸುಪುತ್ರರು ಹಾಗೂ ಶಿಷ್ಯರು. ಶ್ರೀ ಪಿ.ಜಿ. ಲಕ್ಷ್ಮೀನಾರಾಯಣ, ಶ್ರೀ ಎಂ.ಎ. ಕೃಷ್ಣಮೂರ್ತಿ, ಶ್ರೀ ಟಿ.ವಿ. ಭದ್ರಾಚಾರ್ ಮತ್ತು ಶ್ರೀ ಎಂ.ಆರ್. ಸಾಯಿನಾಥ್ ಮುಂತಾದ ವಿದ್ವಾಂಸರುಗಳ ಬಳಿ ಮೃದಂಗ ವಾದನದ ಉನ್ನತ ಶಿಕ್ಷಣ. ಹಲವಾರು ಸಂಗೀತ ಸಾಧಕರಿಗೆ ಸಾಥ್ ನೀಡಿರುವ ಅನುಭವ. ಆಕಾಶವಾಣಿಯ ಬಿ-ಹೈ ಗ್ರೇಡ್ ಕಲಾವಿದರಾಗಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಇವರು ಘಟಂ ಸಹಕಾರ ನೀಡಲಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಕಲಾವಿದರನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.