ಮನೆ ಅಪರಾಧ ಮೈವಿವಿ ಯುವರಾಜ ಕಾಲೇಜಿನಲ್ಲಿ ಹಣ ದುರುಪಯೋಗ ಮಾಡಿಕೊಂಡ ಆರೋಪಿ ಅಧಿಕಾರಿಯನ್ನೆ ಪ.ಜಾತಿ ವಿಶೇಷ ಕೋಶಕ್ಕೆ ನಿಯೋಜನೆ

ಮೈವಿವಿ ಯುವರಾಜ ಕಾಲೇಜಿನಲ್ಲಿ ಹಣ ದುರುಪಯೋಗ ಮಾಡಿಕೊಂಡ ಆರೋಪಿ ಅಧಿಕಾರಿಯನ್ನೆ ಪ.ಜಾತಿ ವಿಶೇಷ ಕೋಶಕ್ಕೆ ನಿಯೋಜನೆ

0

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಹಣಕಾಸು ದುರುಪಯೋಗ ನಡೆದಿದೆ ಎನ್ನಲಾಗಿರುವ  ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್‍‌ ಎಂಬುವರನ್ನು ವಿಶ್ವವಿದ್ಯಾಲಯದ ಮಹಾರಾಜ ಕಾಲೇಜಿನ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿಶೇಷ ಕೋಶದಲ್ಲಿ ಕಾರ್ಯನಿರ್ವಹಿಸಲು ಆದೇಶ ಹೊರಡಿಸಿದೆ.

Join Our Whatsapp Group

ಕಾಲೇಜಿನ ಒಟ್ಟಾರೆ 16 ಖಾತೆಗಳಲ್ಲಿದ್ದ ಲಕ್ಷಾಂತರ ರೂ. ಹೆಚ್ಚು ಹಣವು ಕಾಲೇಜಿನ ಪ್ರಥಮದರ್ಜೆ ಗುಮಾಸ್ತ ಶಿವಕುಮಾರ್‍‌ ಎಂಬುವರ  ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿದೆ ಎಂಬ ಪ್ರಕರಣದಲ್ಲಿ ವಿಶ್ವವಿದ್ಯಾಲಯವು ತನಿಖೆ ನಡೆಸಲು ತಂಡ ರಚಿಸಿತ್ತು.  ತನಿಖೆ ಇನ್ನೂ ನಡೆಯುತ್ತಿರುವ ಹೊತ್ತಿನಲ್ಲಿಯೇ ಶಿವಕುಮಾರ್‍‌ ಅವರನ್ನು ಮಹಾರಾಜ ಕಾಲೇಜಿನಲ್ಲಿ ಕಾರ್ಯನಿರ್ವಹಿಸುವ ಸಂಬಂಧ ವಿಶ್ವವಿದ್ಯಾಲಯದ ಕುಲಪತಿಗಳ ಅನುಮೋದನೆಯಂತೆ 2024ರ ಮೇ 4ರಂದು  ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಂತಾಗಿದೆ.

ಅದೇ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದರ ಪ್ರಕರಣವೊಂದರಲ್ಲಿ ಶಿವಕುಮಾರ್‍‌ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ ಹೆಚ್‌ ಸಿ ದೇವರಾಜೇಗೌಡ  ಅವರ ವಿರುದ್ಧ  ಇಲಾಖೆ ವಿಚಾರಣೆ ನಡೆಸಲು 2024ರ ಮಾರ್ಚ್‌ 12ರಂದು ವಿಶ್ವವಿದ್ಯಾಲಯವು ತೀರ್ಮಾನಿಸಿತ್ತು.

ಅಲ್ಲದೇ ವಿಚಾರಣೆ ಮುಗಿಯುವರೆಗೂ ಇಬ್ಬರೂ  ಕಡ್ಡಾಯವಾಗಿ ರಜೆ ಮೇಲೆ ತೆರಳಬೇಕು ಎಂದು ಆದೇಶವನ್ನೂ ಹೊರಡಿಸಿತ್ತು. ಈ ಆದೇಶದ ವಿರುದ್ಧ ಶಿವಕುಮಾರ್‍‌ ಅವರು ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರಲಿಲ್ಲ.

ಆದರೆ  ಯುವರಾಜ ಕಾಲೇಜಿನ  ಪ್ರಾಂಶುಪಾಲರಾಗಿದ್ದ ಡಾ ಹೆಚ್‌ ಸಿ ದೇವರಾಜೇಗೌಡ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ದೇವರಾಜೇಗೌಡ ಅವರ ಪರ ನೀಡಿದ್ದ ಆದೇಶವನ್ನೇ ಮುಂದಿರಿಸಿ ಕಡ್ಡಾಯ ರಜೆ ಆದೇಶ ಹಿಂಪಡೆಯಲು ಶಿವಕುಮಾರ್‍‌ ಅವರ ಕೋರಿಕೆಗೆ ವಿಶ್ವವಿದ್ಯಾಲಯವು ಮನ್ನಣೆ ನೀಡಿದೆ.

ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರು ನೀಡಿದ್ದ ಅಭಿಪ್ರಾಯ ಮತ್ತು ಕುಲಪತಿಗಳ ಅನುಮೋದನೆಯಂತೆ ಶಿವಕುಮಾರ್‍‌ ಅವರನ್ನು   ಮಹಾರಾಜ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಹೊರಡಿಸಿರುವ ವಿಶ್ವವಿದ್ಯಾಲಯದ  ಆದೇಶವು ಚರ್ಚೆಗೆ ಗ್ರಾಸವಾಗಿದೆ.

ಯುವರಾಜ ಕಾಲೇಜಿನ ವಿದ್ಯಾರ್ಥಿಗಳ ಶುಲ್ಕವೂ ಸೇರಿದಂತೆ ಇನ್ನಿತರೆ ಹಣವನ್ನು ವೈಯಕ್ತಿಕ ಖಾತೆಗೆ ಜಮಾ ಮಾಡಿಕೊಂಡಿರುವ ಕುರಿತು  ಪ್ರಾಂಶುಪಾಲರಾಗಿದ್ದ  ದೇವರಾಜೇಗೌಡ ಅವರು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದರು.  ಕಾಲೇಜಿನ ಪ್ರಾಂಶುಪಾಲರ ಹೆಸರಿನಲ್ಲಿದ್ದ ಖಾತೆಗಳ ಸಂಖ್ಯೆ, ಈ ಖಾತೆಗಳಲ್ಲಿದ್ದ ವಿದ್ಯಾರ್ಥಿ ಶುಲ್ಕವೂ ಸೇರಿದಂತೆ ಇನ್ನಿತರೆ ಲೆಕ್ಕ ಶೀರ್ಷಿಕೆಯಲ್ಲಿದ್ದ ಹಣ ವರ್ಗಾವಣೆ ಆಗಿರುವ ಕುರಿತಾದ ದಾಖಲೆಗಳ ಸಮೇತ ಹಣಕಾಸು ದುರುಪಯೋಗದ ಕುರಿತು ಪತ್ರದಲ್ಲಿ ವಿವರಿಸಿದ್ದರು.

ಯುವರಾಜ ಕಾಲೇಜಿನ ಹೆಸರಿನಲ್ಲಿದ್ದ ಎಫ್‌ ಅಂಡ್‌ ಆರ್‍‌, ವಿದ್ಯಾರ್ಥಿ ವೇತನ, ಜಿ ಆರ್‍‌ ಎ ಸೇರಿದಂತೆ ಮತ್ತಿತರ ಶೀರ್ಷಿಕೆಗಳಲ್ಲಿದ್ದ ಖಾತೆಗಳಿಂದ ಶಿವಕುಮಾರ್‍‌ ಅವರು ತಮ್ಮ ವೈಯಕ್ತಿಕ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಖುದ್ದು ಪ್ರಾಂಶುಪಾಲ ದೇವರಾಜೇಗೌಡ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಅಲ್ಲದೇ ಈ ಪ್ರಕರಣವು ಇನ್ನೂ ತನಿಖಾ ಹಂತದಲ್ಲಿದೆ ಎಂದು ಮೈಸೂರು ವಿವಿಯು ಆರ್‍‌ಟಿಐ ಅಡಿಯಲ್ಲಿ ಹಿಂಬರಹವನ್ನೂ ನೀಡಿತ್ತು.

ಲೆಕ್ಕ ಪರಿಶೋಧನೆಗೆ ಅಸಹಕಾರ

ಮೈಸೂರು ಯುವರಾಜ ಕಾಲೇಜಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲಿಸಲು ನೀಡುವಂತೆ ಲೆಕ್ಕಪರಿಶೋಧಕರು ಕೋರಿದ್ದರು. 2023ರ ಡಿಸೆಂಬರ್‍‌ 14ರಂದು ಕಚೇರಿಯ ಎಲ್ಲಾ ಕಾರ್ಯನಿರ್ವಾಹಕರುಗಳಿಗೆ ಒಳಗೊಂಡಂತೆ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಕಡತಗಳನ್ನು ನೀಡಬೇಕು ಎಂದು ಕಚೇರಿ ಸೂಚನಾ ಪತ್ರ ಹೊರಡಿಸಲಾಗಿತ್ತು. ಆದರೆ ಶಿವಕುಮಾರ್‍‌ ಸೇರಿದಂತೆ ಹಲವರು ಲೆಕ್ಕ ಪರಿಶೋಧನೆಗೆ ಯಾವುದೇ ದಾಖಲೆಗಳನ್ನು ನೀಡದೇ ಅಸಹಕಾರ ತೋರಿದ್ದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಥಮದರ್ಜೆ ಗುಮಾಸ್ತ ಜೆ ಶಿವಕುಮಾರ್‍‌ ಅವರು ರಜೆ ಮೇಲಿದ್ದರು. ಇವರು ರಜೆ ಮುಂದುವರೆಸಿದ್ದರು. ಹೀಗಾಗಿ ಲೆಕ್ಕ ಪರಿಶೋಧನಾ ತಪಾಸಣೆಗೆ ದಾಖಲೆ ನೀಡಬೇಕು ಎಂದು 2023ರ ಡಿಸೆಂಬರ್‍‌ 19ರಂದು ಮೆಮೋ ನೀಡಲಾಗಿತ್ತು. ನಂತರ ಜೆ ಶಶಿಕುಮಾರ್‍‌ ಅವರು ಸೇರಿದಂತೆ ಕಚೇರಿಯ ಯಾವುದೇ ಕಾರ್ಯನಿರ್ವಾಹಕರು ದಾಖಲೆಗಳನ್ನು ಒದಗಿಸುತ್ತಿಲ್ಲ ಎಂದು ಲೆಕ್ಕ ಪರಿಶೋಧಕರು ಮೌಖಿಕವಾಗಿ ತಿಳಿಸಿದ್ದರು. ಹೀಗಾಗಿ ಮತ್ತೊಮ್ಮೆ ಎಲ್ಲಾ ದಾಖಲೆಗಳು ಮತ್ತು ಕಡತಗಳನ್ನು ಲೆಕ್ಕ ಪರಿಶೋಧಕರಿಗೆ ನೀಡಬೇಕು ಎಂದು ಕಚೇರಿಯಿಂದ ಎಲ್ಲಾ ಕಾರ್ಯನಿರ್ವಾಹಕರುಗಳಿಗೆ 2023ರ ಡಿಸೆಂಬರ್‍‌ 30ರಂದು ಎಲ್ಲಾ ಸೂಚನೆ ನೀಡಲಾಗಿತ್ತು ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದರು.

ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ

ಕಾಲೇಜಿನ ಜಿ ಆರ್‍‌ ವಿ (ಖಾತೆ ಸಂಖ್ಯೆ; 64078604199), ಪಿಎಸ್‌ಎಫ್‌ಎಸ್‌ (ಖಾತೆ ಸಂಖ್ಯೆ; 64078606129), ಮತ್ತು ಸಿಎಸ್‌ಎಫ್‌ (ಖಾತೆ ಸಂಖ್ಯೆ; 54007592102) ಒಟ್ಟು ಮೂರು ಖಾತೆಗಳಿಗೆ ಸಂಬಂಧಿಸಿದ ಖಾತೆ ವಿವರಗಳ ಪರಿಶೀಲಿಸಿದಾಗ ನೇರವಾಗಿ ಶಶಿಕುಮಾರ್‍‌ ಅವರಿಗೆ ಧನಾದೇಶದ ಮೂಲಕ ಹಣ ಜಮಾ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.

ಕ್ರಮ ಸಂಖ್ಯೆ 1ರಿಂದ 09ರವರೆಗೆ ಧನಾದೇಶಗಳನ್ನು ಜೆ ಶಶಿಕುಮಾರ್‍‌ ಅವರ ಎಸ್‌ ಬಿ ಖಾತೆ ಸಂಖ್ಯೆ 64006325541 (ಮೈಸೂರು ವಿವಿ ಆವರಣದಲ್ಲಿರುವ ಶಾಖೆ) ಗೆ 4,46,841 ರು. ಕಾಲೇಜಿನ ವಿವಿಧ ಖಾತೆಗಳಿಂದ ಹಣವು ಜಮೆ ಆಗಿದೆ. ಆದರೆ ಈ ಧನಾದೇಶದ ಹಣವು ಇವರ ಖಾತೆಗೆ ಏಕೆ ಜಮಾಗೊಂಡಿದೆ ಎಂಬುದಕ್ಕೆ ಯಾವುದೇ ಮಾಹಿತಿಯೂ ಇರುವುದಿಲ್ಲ. ಇನ್ನೂ ಹೆಚ್ಚಿನ ವಿವರಣೆಗಾಗಿ ಲೆಕ್ಕ ತಪಾಸಣೆ ನಡೆಸಬೇಕು, ಎಂದು ದೇವರಾಜೇಗೌಡ ಅವರು ತಮ್ಮ ಪತ್ರದಲ್ಲಿ ಕೋರಿದ್ದರು.

ಇದಲ್ಲದೇ ವಿದ್ಯಾರ್ಥಿಗಳ ಶುಲ್ಕಗಳನ್ನು ತಮ್ಮ ತಮ್ಮ ಮೊಬೈಲ್‌ಗಳಿಂದ ಜಿ-ಪೇ ಮತ್ತು ಪೇಟಿಎಂ ಮೂಲಕ ಜೆ ಶಶಿಕುಮಾರ್‍‌ ಅವರ ವೈಯಕ್ತಿಕ ಖಾತೆಗೆ 2021ರ ಫೆ.12ರಿಂದ 2023ರ ಸೆ.14ಸರವರೆಗೆ ಒಟ್ಟಾರೆ 7,76,654 ರು. ಜಮಾ ಆಗಿತ್ತು.

ಕಾಲೇಜಿನ ವಿವಿಧ ಖಾತೆಗಳಿಂದ ವೈಯಕ್ತಿಕ ಖಾತೆಗೆ ಒಟ್ಟಾರೆ 45.50 ಲಕ್ಷ ರು. ಜಮಾ ಆಗಿದೆ ಎಂದೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

2022ರ ಜನವರಿ 221ರಂದು 42,200 ಮತ್ತು 2022ರ ಫೆ.22ರಂದು 39,600 ರು. ಜಮಾ ಆಗಿತ್ತು.

ಅಲ್ಲದೇ 2021ರ ಡಿಸೆಂಬರ್‍‌ 221ರಂದು ಜೆ ಶಿವಕುಮಾರ್‍‌ ಅವರ ವೈಯಕ್ತಿಕ ಖಾತೆಗೆ 45,437 ರು. ವರ್ಗಾವಣೆ ಆಗಿತ್ತು. 2022ರ ಏಪ್ರಿಲ್‌ 18ರಂದು 77,050 ರು. ವೈಯಕ್ತಿಕ ಖಾತೆಗೆ ಜಮಾ ಆಗಿತ್ತು.

2022ರ ಮೇ 13 ಮತ್ತು  ಜುಲೈ 1  ರಂದು ತಲಾ  37,600 ರು. ವರ್ಗಾವಣೆ ಆಗಿತ್ತು ಎಂಬುದು ಬ್ಯಾಂಕ್‌ ನ ದಾಖಲೆಗಳಿಂದ ಗೊತ್ತಾಗಿದೆ.

ಜೆ ಶಿವಕುಮಾರ್‍‌ ಅವರು ನಗದು ಗುಮಾಸ್ತರಾಗಿದ್ದ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆಯಲ್ಲಿ ಮೂಲ ರಸೀತಿ, ಮೂಲ ಹುಂಡಿಗಳು, ಮತ್ತು ಕಡತಗಳನ್ನು ಲೆಕ್ಕ ಪರಿಶೋಧನೆಗೆ ನೀಡಿದರೆ ಸಿಕ್ಕಿ ಬೀಳುವ ಭಯ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.

ಹಿಂದಿನ ಲೇಖನಮಂಡ್ಯ: ಅಕ್ರಮವಾಗಿ ಸಾಗಿಸುತ್ತಿದ್ದ ಗೋವಿನ ಕರುಗಳ ರಕ್ಷಣೆ
ಮುಂದಿನ ಲೇಖನಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಜಾರಿ