ಹುಬ್ಬಳ್ಳಿ(Hubballi)-ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿ ಮೊಹಮ್ಮದ್ ಆರೀಫ್ ನಾಗರಾಳ ಪೊಲೀಸ್ ಕಸ್ಟಡಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಗುರುವಾರ ಮಧ್ಯರಾತ್ರಿ ಟರ್ಪಂಟೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆರೀಫ್, ಅಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಟರ್ಪಂಟೈಲ್ ನೀಡುವಂತೆ ವಿನಂತಿಸಿದ್ದಾನೆ. ಗಾಯಕ್ಕೆ ಹಚ್ಚಲು ಕೇಳಿರಬಹುದು ಎಂದು ಸಿಬ್ಬಂದಿ ಬಾಟಲ್ ನೀಡಿದ್ದು, ಅದನ್ನು ತಕ್ಷಣವೇ ಕುಡಿದಿದ್ದಾನೆ.
ಈ ವೇಳೆ ಅಲ್ಲಿಯೇ ಇದ್ದ ಮತ್ತೊಬ್ಬ ಆರೋಪಿ ಮಹಾನಗರ ಪಾಲಿಕೆಯ ಎಐಎಂಐಎಂ ಸದಸ್ಯ ನಸೀರ್ ಅಹ್ಮದ್ ಹೊನ್ಯಾಳ ತಕ್ಷಣ ಬಾಟಲ್ ಅನ್ನು ಕಿತ್ತುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೀಫ್ ಚೇತರಿಸಿಕೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.