ಜಲಂಧರ್: ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಸಾವಿಗೆ ಕಾರಣನಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಅನಿವಾಸಿ ಭಾರತೀಯ ಅಮೃತಪಾಲ್ ಸಿಂಗ್ ಧಿಲ್ಲೋನ್ ಅವರನ್ನು ಬಂಧಿಸುವುದರ ಜೊತೆಗೆ, ಪೊಲೀಸರು ಫಾರ್ಚೂನರ್ ಎಸ್‌ಯುವಿಯನ್ನು ಸಹ ವಶಪಡಿಸಿಕೊಂಡಿದ್ದಾರೆ. 114 ವರ್ಷದ ಫೌಜಾ ಸಿಂಗ್ ಸಂಜೆ ವಾಕಿಂಗ್ ಹೋಗಿದ್ದಾಗ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದ, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಜಲಂಧರ್‌ನ ಕರ್ತಾರ್‌ಪುರದ ದಾಸುಪುರ ಗ್ರಾಮದ ನಿವಾಸಿ ಧಿಲ್ಲೋನ್‌ನನ್ನು ಮಂಗಳವಾರ ತಡರಾತ್ರಿ ಬಂಧಿಸಲಾಗಿದ್ದು, ಭೋಗ್‌ಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರಂಭಿಕ ತನಿಖೆಯಲ್ಲಿ ಈ ವಾಹನವನ್ನು ಕಪುರ್ತಲಾ ನಿವಾಸಿ ವರೀಂದರ್ ಸಿಂಗ್ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಜಲಂಧರ್ ಪೊಲೀಸ್ ತಂಡಗಳು ತಕ್ಷಣವೇ ಕಪುರ್ತಲಾ ತಲುಪಿ ವರೀಂದರ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಮಯದಲ್ಲಿ, ವರೀಂದರ್ ಅವರು ಎರಡು ವರ್ಷಗಳ ಹಿಂದೆ ಈ ಕಾರನ್ನು ಅಮೃತ್ಪಾಲ್ ಸಿಂಗ್ ಧಿಲ್ಲೋನ್ ಎಂಬ ಅನಿವಾಸಿ ಭಾರತೀಯನಿಗೆ ಮಾರಾಟ ಮಾಡಿರುವುದಾಗಿ ಬಹಿರಂಗಪಡಿಸಿದರು, ಅವರು ಇತ್ತೀಚೆಗೆ ಕೆನಡಾದಿಂದ ಹಿಂದಿರುಗಿದ್ದರು.
ಅಪಘಾತದ ನಂತರ, ಧಿಲ್ಲೋನ್ ಜಲಂಧರ್ ನಗರವನ್ನು ತೊರೆದು ಹಲವಾರು ಹಳ್ಳಿಗಳ ಮೂಲಕ ತನ್ನ ಹುಟ್ಟೂರು ಕರ್ತಾರ್‌ಪುರವನ್ನು ತಲುಪಿದ್ದ. ಆರಂಭಿಕ ವಿಚಾರಣೆಯ ಸಮಯದಲ್ಲಿ, ಧಿಲ್ಲೋನ್ ಅಪಘಾತ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.















