ಬೆಂಗಳೂರು (Bengaluru)- ಕೋವಿಡ್ 19ನ (Covid 19) ರೂಪಾಂತರಿ ಓಮಿಕ್ರಾನ್‌ನ (Omicron) ಮತ್ತೆರಡು ಹೊಸ ತಳಿಗಳು ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.
ಬಿಎ.2 ರೂಪಾಂತರಗಳು ದಿಲ್ಲಿ ಮತ್ತು ಮುಂಬೈನಲ್ಲಿ ಕಾಣಿಸಿಕೊಂಡಿದ್ದವು. ಇದೀಗ ಬೆಂಗಳೂರಲ್ಲಿ ಪತ್ತೆಯಾಗಿದೆ ಎನ್ನುವ ಅಂಶ ಜನರಲ್ಲಿ ಆತಂಕ ಮೂಡಿಸಿದೆ.
ದೇಶದಲ್ಲಿ ಕೊರೊನಾದ ನಾಲ್ಕನೇ ಅಲೆ ಈಗಾಗಲೇ ಶುರುವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಮಿತಿಯ ವೈದ್ಯರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಓಮಿಕ್ರಾನ್ ಉಪ ರೂಪಾಂತರ ಬಿಎ.2ಗೆ ಸಂಬಂಧಿಸಿದ ಎರಡು ಹೊಸ ರೂಪಾಂತರಿಗಳಾದ ಬಿಎ.2.10 ಮತ್ತು ಬಿಎ.2.12 ವರದಿಯಾಗಿರುವ ಬಗ್ಗೆ ಸಾಧ್ಯತೆ ಇದೆ. ಬಿಎ.2ನ ಈ ಉಪವರ್ಗಗಳ ವೈರಸ್ ಪ್ರಸರಣ ವೈಶಿಷ್ಟ್ಯಗಳನ್ನು ತಿಳಿಯಲು ಹಾಲಿ ಇರುವ ದತ್ತಾಂಶಗಳು ಕಡಿಮೆ ಇದ್ದು, ಹೆಚ್ಚಿನ ಅಧ್ಯಯ ನಡೆಯುತ್ತಿದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. ಆದರೆ ಹೊಸ ತಳಿಯ ಬಗ್ಗೆ ಆರೋಗ್ಯ ಇಲಾಖೆ ಖಚಿತ ಮಾಹಿತಿ ನೀಡಿಲ್ಲ.
ರಾಜ್ಯದಲ್ಲಿ ಓಮಿಕ್ರಾನ್‌ನ ಹೊಸ ತಳಿ ಕಾಣಿಸಿಕೊಂಡಿದೆ ಎನ್ನುವ ಆತಂಕದ ನಡುವೆಯೇ ಸೋಂಕಿತರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಕಳೆದ ಕೆಲ ದಿನಗಳಿಂದ ನೂರಕ್ಕಿಂತ ಕಡಿಮೆ ಇದ್ದ ಸೋಂಕಿತರ ಸಂಖ್ಯೆ ಶನಿವಾರ 139ಕ್ಕೆ ಏರಿಕೆಯಾಗಿದೆ. ಶನಿವಾರ 10,118 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು, 139 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 39.46 ಲಕ್ಷಕ್ಕೆ ತಲುಪಿದ್ದು, 40,057 ಜನರು ಇದುವರೆಗೂ ಮೃತರಾಗಿದ್ದಾರೆ.
ದೇಶದಲ್ಲಿ ಸೋಂಕಿನ ಪಾಸಿಟಿವಿಟಿ ದರದಲ್ಲೂಏರಿಕೆ ಕಂಡು ಬಂದಿದೆ. ಶನಿವಾರ 2,527 ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ ದೇಶವ್ಯಾಪಿ ಪಾಸಿಟಿವಿಟಿ ದರ ಶೇ.0.56ರಷ್ಟು ದಾಖಲಾಗಿದ್ದು, ಓಮಿಕ್ರಾನ್ ರೂಪಾಂತರದ ಎಕ್ಸ್‌ಇ ತಳಿಯು ಇದುವರೆಗಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ ಹಬ್ಬುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಾಸಿಟಿವಿಟಿ ದರ ನಾಗಾಲೋಟ ಪಡೆಯುವ ಸಾಧ್ಯತೆಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.