ಮನೆ ಮನರಂಜನೆ ‘ಶಕ್ತಿಧಾಮ’ದ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಸದಾ ಸಿದ್ಧ: ನಟ ವಿಶಾಲ್

‘ಶಕ್ತಿಧಾಮ’ದ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಸದಾ ಸಿದ್ಧ: ನಟ ವಿಶಾಲ್

0

ಮೈಸೂರು(Mysuru): ಮಹಿಳೆಯರ ಪುನರ್ವಸತಿ ಕೇಂದ್ರ ‘ಶಕ್ತಿಧಾಮ’ದ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಸದಾ ಸಿದ್ದ ಎಂದು ಚಲನಚಿತ್ರ ನಟ ವಿಶಾಲ್ ಹೇಳಿದರು.

ಡಿ.22ರಂದು ತೆರೆಕಾಣಲಿರುವ 32ನೇ ಚಿತ್ರ ‘ಲಾಠಿ’ ಸಿನಿಮಾ ಪ್ರಚಾರಕ್ಕಾಗಿ ಗುರುವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ರಾಜ್ ಕುಟುಂಬದಿಂದ ಒಂದೇ ಒಂದು ಕರೆ ಬಂದರೆ, ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಬಂದು ಬಿಡುತ್ತೇನೆ ಎಂದು ತಿಳಿಸಿದರು.

ಶಕ್ತಿಧಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ರಾಜ್‌, ಪುನೀತ್‌ ಅವರ ಕಾರ್ಯವನ್ನು ಅವರ ಕುಟುಂಬ ಮುಂದುವರಿಸಿದೆ. 1800 ಮಕ್ಕಳಿಗೆ ಬೆಳಕಾಗಿದೆ. ಅವರಿಗೆ ಸ್ವಯಂಸೇವಕನಾಗಿ ನೆರವಾಗಲು, ಪರಸ್ಪರ ಜೊತೆಯಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.

ಪುನೀತ್‌ ಆಂಬುಲೆನ್ಸ್‌ ಆರಂಭಿಸಿರುವ ನಟ ‍ಪ್ರಕಾಶ್‌ ರಾಜ್‌ ಅವರಿಂದ, ಒಂದು ಆಂಬುಲೆನ್ಸ್‌ ನೀಡುವಂತೆ ಕರೆ ಬಂದಿತ್ತು. ಐದು ವಾಹನ ನೀಡುವುದಕ್ಕೆ ಸಿದ್ಧನಿದ್ದೇನೆ. ಯಾರೇ ಸೇವಾ ಕಾರ್ಯ ಮಾಡುತ್ತಿದ್ದರೂ ನೆರವಾಗಬೇಕಾದ್ದು ಕರ್ತವ್ಯ ಎಂದು ಅಭಿಪ್ರಾಯಪಟ್ಟರು.

‘ಲಾಠಿ’ ಕನ್ನಡ, ತಮಿಳು, ತೆಲಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಪೊಲೀಸ್‌ ಕಾನ್‌’ಸ್ಟೆಬಲ್‌ ಪಾತ್ರ ನಿರ್ವಹಿಸಿದ್ದು, ದೇಶದ ಎಲ್ಲ ಕಾನ್‌’ಸ್ಟೆಬಲ್‌ಗಳಿಗೆ ಈ ಚಿತ್ರ ಅರ್ಪಣೆ. ಯುವನ್‌ ಶಂಕರ್‌ ರಾಜಾ ಅವರ ಸಂಗೀತ ಹಾಗೂ ವಿನೋದ್‌ ಕುಮಾರ್‌ ನಿರ್ದೇಶನವಿದ್ದು, ನನ್ನ ಸಿನಿಮಾ ಜೀವನದಲ್ಲೇ ದೊಡ್ಡ ಬಜೆಟ್‌ ಚಿತ್ರ ಇದಾಗಿದೆ ಎಂದರು.

ಉತ್ತರ– ದಕ್ಷಿಣ ಎಂಬೆಲ್ಲ ಒಡಕು ಬೇಡ. ಉತ್ತಮ ಚಿತ್ರಗಳು ಭಾರತೀಯ ಚಿತ್ರರಂಗದಿಂದ ಬರುತ್ತಿವೆ. 2024ರ ವೇಳೆ ಕನ್ನಡದಲ್ಲೂ ಅಭಿನಯಿಸಲು ಉತ್ಸುಕನಾಗಿದ್ದೇನೆ ಎಂದರು.

ಪೈರಸಿಗೆ ಕಡಿವಾಣ ಹಾಕಬೇಕು: ಸರ್ಕಾರಕ್ಕೆ ಒಂದು ದಿನದ ಕೆಲಸ: ಜನರಿಗೆ ಮನರಂಜನೆ ನೀಡುತ್ತಿರುವ ಸಿನಿಮಾ ಕ್ಷೇತ್ರದವರು ಶೇ 28 ರಷ್ಟು ಜಿಎಸ್‌’ಟಿ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಸರ್ಕಾರ ಪೈರಸಿ ವಿರುದ್ಧ ಕ್ರಮವಹಿಸುತ್ತಿಲ್ಲ. ಪೈರಸಿ ತಡೆಯಲು ಸರ್ಕಾರಕ್ಕೆ ಒಂದು ದಿನ ಸಾಕು ಎಂದು ವಿಶಾಲ್ ಹೇಳಿದರು.

ಅಶ್ಲೀಲ ವೆಬ್‌’ಸೈಟ್‌ಗಳನ್ನು ರದ್ದುಗೊಳಿಸಿದಂತೆ ಸಿನಿಮಾ ಪೈರಸಿಗೂ ಕಡಿವಾಣ ಹಾಕಬೇಕು. ಸೈಬರ್‌ ಅಪರಾಧ ತಡೆಗಟ್ಟಬೇಕು. ಸಿನಿಮಾ ಕ್ಷೇತ್ರಕ್ಕೆ ಬಹಳಷ್ಟು ನಷ್ಟವಾಗುತ್ತಿದೆ. ಎಷ್ಟು ನಿರ್ಮಾಪಕರು ಬೀದಿಗೆ ಬಿದ್ದಿದ್ದಾರೆ. ಎಷ್ಟು ಜನ ಸಂಕಷ್ಟಕ್ಕೊಳಗಾಗಿದ್ದಾರೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಮುಂಬೈನ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ
ಮುಂದಿನ ಲೇಖನಪ್ರತ್ಯೇಕ ಪ್ರಕರಣ: ರೈತರ ಮೇಲೆ ಕಾಡಾನೆ, ಕರಡಿ ದಾಳಿ