ಬೆಳಗಾವಿ(Belagavi): 2 ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ತೋರುತ್ತಿರುವುದನ್ನು ಖಂಡಿಸಿ ಬರುವ ಡಿಸೆಂಬರ್ 12 ರಂದು 25 ಲಕ್ಷ ಜನರಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಪಂಚಮಸಾಲಿ ಸಮುದಾಯದ ಕೂಡಲಸಂಗಮ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಹುಕ್ಕೇರಿಯಲ್ಲಿ ಹಮ್ಮಿಕೊಂಡ ಪಂಚಮಸಾಲಿ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ 2ಎ ಮೀಸಲಾತಿ ಹೋರಾಟ ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯ ಕಾಣಲಿದೆ. ಸರ್ಕಾರದ ವಿಳಂಬ ನೀತಿ ಖಂಡಿಸಿ ಪಂಚಮಸಾಲಿ ಸಮುದಾಯದಿಂದ ಸಮಾವೇಶ ನಡೆಸಲಾಗುತ್ತಿದೆ. ಶೇ 82ರಷ್ಟು ಬಹುಸಂಖ್ಯಾತ ಪಂಚಮಸಾಲಿ ಸಮಾಜದವರು ಅಧಿಕಾರದಿಂದ ವಂಚಿತರಾಗಿದ್ದಾರೆ., ನಾನು ಪೀಠಾಧ್ಯಕ್ಷನಾದ ಬಳಿಕ ಎಂದೆಂದಿಗೂ ಯಾರೂ ಏನನ್ನೂ ಕೇಳಿಲ್ಲ. ಮೀಸಲಾತಿ ಸಿಗೋವರೆಗೂ ಏನೂ ಬೇಡ, ಹೋರಾಟಕ್ಕೆ ಬನ್ನಿ ಎಂದು ಕರೆ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ನಾಯಕರು ಪಂಚಮಸಾಲಿಗಳಿಗೆ ಅಗೌರವ ಕೊಡುವ ಹೇಳಿಕೆ ಕೊಟ್ಟಿದ್ದರಿಂದ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮೀಸಲಾತಿ ಹೋರಾಟದಲ್ಲಿ ಭಾಗಿಯಾದ ನಾಯಕರ ವಿಚಾರದಲ್ಲಿ ತಪ್ಪಾಗಿ ನಡೆಸುಕೊಳ್ಳುವ, ಅಗೌರವ ಮಾಡಿದೆ. ಆದರೆ ನಾವು ಸುಮ್ಮನೆ ಇರಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಈ ಸಮಾವೇಶ ತೋರಿಸಿಕೊಟ್ಟಿದೆ ಎಂದರು.
2ಎ ಮೀಸಲಾತಿಗೆ ಆಗ್ರಹಿಸಿ ಸರ್ಕಾರಕ್ಕೆ ಕೊಟ್ಟ ಗಡುವು ಮುಗಿದು ಹೋಗಿದೆ. ಸರ್ಕಾರ ನಾಲ್ಕು ಬಾರಿ ಮಾತು ಕೊಟ್ಟು ಮರಿದು ಕೊಂಡಿದೆ. ಎಸ್ಸಿ ಎಸ್ಟಿ ಸಮಾಜಕ್ಕೆ ಮೀಸಲಾತಿ ಕೊಟ್ಟಂತೆ ನಮಗೂ ಮೀಸಲಾತಿ ಕೊಡಬೇಕು. ಮೀಸಲಾತಿ ವಿಳಂಬಕ್ಕೆ ಪಂಚಮಸಾಲಿ ಸಿಟ್ಟಾಗಿದ್ದಾರೆ. ಚುನಾವಣೆ ಬರುವ ಮುಂಚೆ ಮೀಸಲಾತಿ ಘೋಷಣೆ ಮಾಡಬೇಕು. ಸಿಎಂಗೆ ಕಳಕಳಿ ಇದ್ದರೆ ಮೀಸಲಾತಿಯನ್ನು ಕೂಡಲೇ ಘೋಷಿಸಲಿ ಎಂದು ಶ್ರೀಗಳು ಸವಾಲು ಹಾಕಿದರು.