ಮನೆ ದೇವಸ್ಥಾನ ಗುಹಾಂತರ ಶ್ರೀ ರಾಮಲಿಂಗೇಶ್ವರ ದೇವಾಲಯ

ಗುಹಾಂತರ ಶ್ರೀ ರಾಮಲಿಂಗೇಶ್ವರ ದೇವಾಲಯ

0

ಬೆಂಗಳೂರು ಮಹಾನಗರದಲ್ಲಿ ಹಲವು ಪ್ರಾಚೀನ ಗುಹಾಂತರ ದೇವಾಲಯಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಬಸವನಗುಡಿ ಬಳಿಯ ಕೆಂಪೇಗೌಡ ನಗರದಲ್ಲಿ ಗವಿ ಗಂಗಾಧರೇಶ್ವರ ದೇವಾಲಯ ಇರುವುದು ಗುಹೆಯಲ್ಲಿಯೇ. ಮತ್ತೊಂದು ಗುಹಾಂತರ ದೇವಾಲಯ ಬೆಂಗಳೂರಿನಿಂದ ಬನ್ನೇರುಘಟ್ಟಕ್ಕೆ ಹೋಗುವ ರಸ್ತೆಯಲ್ಲಿರುವ ಹುಳಿಮಾವಿನಲ್ಲಿದೆ.

Join Our Whatsapp Group

ಪ್ರಸ್ತುತ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಆಡಳಿತಕ್ಕೆ ಒಳಪಡುವ ಮೊದಲು ಈ ಗುಹಾಂತರ ದೇವಾಲಯ ಶ್ರೀ ರಮಾನಂದ ಸ್ವಾಮೀಜಿಯವರ ಆಶ್ರಮವಾಗಿತ್ತು ಎಂದು ತಿಳಿದುಬರುತ್ತದೆ.

ಸುಮಾರು 2 ಸಾವಿರ ವರ್ಷಗಳಷ್ಟು ಪುರಾತನವಾದದ್ದು ಎಂದು ಹೇಳಲಾಗುವ ಮತ್ತು ನೈಸರ್ಗಿಕವಾದ ಬೃಹತ್ ಏಕ ಶಿಲೆಯ ಕೆಳಗೆ ಇರುವ ಈ ಗುಹೆಯಲ್ಲಿ ಶ್ರೀ ರಾಮಾನಂದ ಸ್ವಾಮೀಜಿ ಹಲವಾರು ವರ್ಷಗಳ ಕಾಲ ತಪವನ್ನಾಚರಿಸಿದ್ದರಂತೆ. ಅವರ ಸಮಾಧಿಯೂ ಗುಹೆಯ ಹೊರಗೆ ನವಗ್ರಹ ಮಂಟಪದ ಬಳಿ ಇದೆ. ಅವರ ಶಿಲಾಮೂರ್ತಿಯೂ ಇದೆ.

ಆದರೆ, ಈ ಗುಹೆಯಲ್ಲಿ ಸಾವಿರಾರು ವರ್ಷಗಳ ಹಿಂದೆ ಋಷಿ ಮುನಿಗಳು ತಪಸ್ಸು ಆಚರಿಸುತ್ತಿದ್ದರು ಎಂದು ಹೇಳಲಾಗಿದ್ದು, ಪುರಾತನ ಸಮಾಧಿಯೂ ಪತ್ತೆಯಾಗಿದೆ, ಆದರೆ ಇದು ಯಾರ ಸಮಾಧಿ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಆ ಜಿಜ್ಞಾಸೆಗಳು ಹಾಗಿರಲಿ, ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಹುಳಿಮಾವು ಗೇಟ್ ಮತ್ತು ಮೀನಾಕ್ಷಿ ದೇವಾಲಯದ ನಡುವೆ ಇರುವ ಜೋಡಿ ರಸ್ತೆಯಲ್ಲಿ ಎಡಕ್ಕೆ ತಿರುಗಿದರೆ ಬಿಜಿಎಸ್ ಪಬ್ಲಿಕ್ ಶಾಲೆಯ ಪಕ್ಕದಲ್ಲಿ ಈ ಗುಹಾಂತರ ದೇವಾಲಯ ಪ್ರವೇಶಿಸಿದರೆ ಅವರ್ಣನೀಯ ಅನುಭವ ಆಗುವುದಂತೂ ಸತ್ಯ.

ಗುಹೆಯ ದ್ವಾರದ ಮೇಲೆ  ಬಂಡೆಗೆ ಹೊಂದಿಕೊಂಡಂತೆ ಇತ್ತೀಚೆಗೆ ಮೆಟ್ಟಿಲಿನ ಹಾಗೆ ನಾಲ್ಕು ಹಂತದ ಗೋಪುರ ನಿರ್ಮಿಸಲಾಗಿದ್ದು, ಇದರಲ್ಲಿ ಶಿವಪಾರ್ವತಿ, ಗಣಪತಿ, ಲಕ್ಷ್ಮೀ, ಸರಸ್ವತಿ, ನಂದಿ, ಭೃಂಗಿ, ಶ್ರೀರಾಮ, ಲಕ್ಷ್ಮಣ, ಸೀತಾಮಾತೆಯರು ಋಷಿ ಮುನಿಗಳು, ನವಿಲು, ಆಂಜನೇಯ ಮೊದಲಾದ ಗಾರೆಯ ಶಿಲ್ಪಗಳನ್ನು ಅಳವಡಿಸಲಾಗಿದೆ.

ಗುಹೆಯನ್ನು ಪ್ರವೇಶಿಸಿದರೆ ಆರು ಅಡಿ ಎತ್ತರವಷ್ಟೇ ಇರುವ ಏಕಶಿಲೆಯ ಕೆಳಗಿರುವ ನಿರಾಧಾರವಾದ ಬೃಹತ್ ವಿಸ್ತಾರದ ಗುಹೆ ಗಮನಸೆಳೆಯುತ್ತದೆ. ವಿಶಾಲವಾಗಿ ಹರಡಿಕೊಂಡಿರುವ ಈ ಗುಹೆಯಲ್ಲಿ ಈಗ ನೆಲದ ಮೇಲೆ ಗ್ರಾನೈಟ್ ಶಿಲೆ ಹಾಕಲಾಗಿದ್ದು ಭಕ್ತರು ಇಲ್ಲಿ ಧ್ಯಾನ ಮಾಡುತ್ತಿರುವ ದೃಶ್ಯ ಕಾಣ ಸಿಗುತ್ತದೆ.

ಗುಹೆಯನ್ನು ಪ್ರವೇಶಿಸುತ್ತಿದ್ದಂತೆ ಎಡ ಭಾಗದಲ್ಲಿ ವಿಶಾಲವಾದ ಎರಡು ಪ್ರತ್ಯೇಕ ಗರ್ಭಗೃಹ ಕಾಣಿಸುತ್ತದೆ. ಈ ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಅದರ ಎದುರು ನಂದಿಯ ವಿಗ್ರಹವಿದೆ. ಮಧ್ಯದಲ್ಲಿ ಗರ್ಭಗೃಹದ ಹೊರಗೆ ಗಣಪತಿಯ ಮೂರ್ತಿಯಿದೆ ಇನ್ನು ಬಲಭಾಗದ ಗರ್ಭಗೃಹದಲ್ಲಿ ಲಕ್ಷ್ಮಣ ಸಮೇತ ಸೀತಾರಾಮರ ವಿಗ್ರಹವಿದೆ. 

ನಿತ್ಯವೂ ಇಲ್ಲಿ ರಾಮಲಿಂಗೇಶ್ವರನಿಗೂ, ಲಕ್ಷ್ಮಣ ಸಮೇತ ಸೀತಾರಾಮ ದೇವರಿಗೂ ಪೂಜೆ ನಡೆಯುತ್ತದೆ. ಹರಿ ಮತ್ತು ಹರರಲ್ಲಿ ಯಾವುದೇ ಭೇದವಿಲ್ಲ ಎಂಬುದನ್ನು ಸಾರುವ ಈ ಗುಹಾಂತರ ದೇವಾಲಯದಲ್ಲಿ ರಾಮನವಮಿಯ ವಿಶೇಷ ಪೂಜೆಯೂ ನಡೆಯುತ್ತದೆ, ಶಿವರಾತ್ರಿಯ ಜಾಗರಣೆಯೂ ಜರುಗುತ್ತದೆ. ಈ ಗುಹೆಯಲ್ಲಿ ನಂದಿ ಬೆಟ್ಟಕ್ಕೆ ಮತ್ತು ಕಾಶಿಗೆ ಹೋಗಲು ಸುರಂಗ ಮಾರ್ಗವಿದೆ ಎಂಬ ಮಾತೂ ಜನಜನಿತವಾಗಿದೆ.

ಐತಿಹ್ಯ: ಹುಳಿಮಾವು, ಹಿಂದೆ ಅಮರಾಪುರ ಎಂದು ಕರೆಸಿಕೊಂಡಿತ್ತಂತೆ.  1650ರ ಸುಮಾರಿನಲ್ಲಿ  ಈ ಊರನ್ನು ಸಾರಕೇಯ (ಈಗಿನ ಸಾರಕ್ಕಿ) ಅರಸರು ಆಳುತ್ತಿದ್ದರಂತೆ. ಈ ಪ್ರದೇಶದಲ್ಲಿ ಹುಳಿ ಮಾವಿನ ಮರಗಳ ತೋಟವಿದ್ದ ಕಾರಣ, ಇದಕ್ಕೆ ಆಮ್ರ ಎಂದರೆ ಹುಳಿ ಮಾವಿನ ಪುರ, ಆಮ್ರಪುರ ಎಂದು ಕರೆಯುತ್ತಿದ್ದರಂತೆ. ಕಾಲಾನಂತರದಲ್ಲಿ ಊರಿಗೆ ಹುಳಿ ಮಾವು ಎಂಬ ಸಾಮಾನ್ಯ ಹೆಸರೇ ಶಾಶ್ವತವಾಯಿತು ಎಂದು ಹೇಳಲಾಗುತ್ತದೆ.

ದಟ್ಟ ಅರಣ್ಯ ಪ್ರದೇಶದಲ್ಲಿದ್ದ ಈ ಗುಹೆಯಲ್ಲಿ ಶ್ರೀರಾಮಾನಂದ ಸ್ವಾಮೀಜಿ ತಪಸ್ಸು ಆಚರಿಸಲು ಬಂದು ಈ ಗುಹೆಯ ಕಲ್ಲಿನಲ್ಲಿ ಕುಳಿತರಂತೆ. ಆಗ ಅವರಿಗೆ ಅಶರೀರವಾಣಿಯೊಂದು, ಅವರು ಕುಳಿತ ಬಂಡೆಯ ಕೆಳಗೆ, ಗುಹೆಯಿರುವ ಅದರಲ್ಲಿ ಶಿವಲಿಂಗವಿರುವ ವಿಷಯ ತಿಳಿಸಿತಂತೆ. ಸ್ವಾಮೀಜಿ ಸ್ಥಳೀಯರಾದ ಮರಿಯಪ್ಪ ಎಂಬುವವರ  ನೆರವಿನಿಂದ ಗಿಡಗಂಟೆ ಕತ್ತರಿಸಿ, ನೋಡಿದಾಗ ಮುಚ್ಚಿಹೋಗಿದ್ದ ಈ ಗುಹೆ ಕಾಣಿಸಿತಂತೆ. ಅದರಲ್ಲಿದ್ದ ಕಲ್ಲುಮಣ್ಣು ತೆಗೆಸಿದಾಗ ನಂದಿ ಸಹಿತನಾದ ಶಿವಲಿಂಗ ದರ್ಶನವಾಯಿತಂತೆ. ಅವರೇ ಇಲ್ಲಿ ರಾಮಲಕ್ಷ್ಮಣ ಸೀತಾ ಮಾತೆಯ ವಿಗ್ರಹ ಪ್ರತಿಷ್ಠಾಪಿಸಿದ್ದು ಎಂದೂ ತಿಳಿದುಬರುತ್ತದೆ.

ಬಳಿಕ ಸ್ಥಳೀಯರ ಕೋರಿಕೆಯ ಮೇರೆಗೆ  ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠ ಈ ದೇವಾಲಯದ ಜವಾಬ್ದಾರಿ ವಹಿಸಿಕೊಂಡಿತು. 1994ರಲ್ಲಿ ಯೋಗಿ ರಾಮಾನಂದ ಆಶ್ರಮ ಮತ್ತು ಶ್ರೀ ರಾಮಲಿಂಗೇಶ್ವರ ಗುಹಾಂತರ ದೇವಾಲಯದ ಪ್ರಾಕಾರ ನಿರ್ಮಾಣ ಮಾಡಿತು. ಬಳಿಕ 2014ರಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯದಲ್ಲಿ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಮಹಾಕುಂಭಾಭಿಷೇಕ ಜರುಗಿತ್ತು. ದೇವಾಲಯವು ಪ್ರತಿ ದಿನ ಬೆಳಗ್ಗೆ 6ರಿಂದ 12.40 ಮತ್ತು ಸಂಜೆ 5ರಿಂದ 7.30ರವರೆಗೆ ತೆರೆದಿರುತ್ತದೆ.

ಹಿಂದಿನ ಲೇಖನವಿಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ
ಮುಂದಿನ ಲೇಖನಹುಣಸೂರು ಜೋಡಿ ಕೊಲೆ ಪ್ರಕರಣ: ಓರ್ವನ ಬಂಧನ