ಮೈಸೂರು: ಭಾರತ ಸಂವಿಧಾನ ಅಂಗೀಕೃತಗೊಂಡ 75 ವರ್ಷಗಳ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಿಲ್ಲೆಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ನಗರದ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ನಡೆದ ಆಚರಣಾ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಸರ್ಕಾರದ ನಿರ್ದೇಶನದಂತೆ ಸಂವಿಧಾನ ಹಾಗೂ ಸಂವಿಧಾನ ಪೀಠಿಕೆಯ ಆಶೋತ್ತರಗಳನ್ನು ಜನಮಾನಸಕ್ಕೆ ಮುಟ್ಟಿಸುವ ಹಿನ್ನೆಲೆಯಲ್ಲಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜನವರಿ 26 ಕ್ಕೆ ಜಿಲ್ಲಾಕೇಂದ್ರದಿಂದ ಆರಂಭವಾಗುವ ಜಾಥಾ ಪೆಬ್ರವರಿ 23ಕ್ಕೆ ಜಿಲ್ಲೆಯಲ್ಲಿ ಮುಕ್ತಾಯಗೊಂಡು ಬೆಂಗಳೂರು ತಲುಪಲಿದೆ.
2 ಮಾಹಿತಿ ಪೂರ್ಣ ಟ್ಯಾಬ್ಲೋ ವಾಹನಗಳು ಮೈಸೂರು ಮತ್ತು ಹುಣಸೂರು ಉಪವಿಭಾಗಗಳಲ್ಲಿ ಸಂಚರಿಸಲಿವೆ ಎಂದರು.
ಜಿಲ್ಲೆಯ 256 ಗ್ರಾಮ ಪಂಚಾಯತಿ, 14 ಸ್ಥಳೀಯ ಸಂಸ್ಥೆಗಳು ಹಾಗೂ 1ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳು ಅಂಬೇಡ್ಕರರ ಆಶಯಗಳೊಂದಿಗೆ ಸಾಮಾಜಿಕ ನ್ಯಾಯ, ಸೌಹಾರ್ದ, ಭಾತೃತ್ವ ಹಾಗೂ ಸಮಾನತೆಯ ಸಂದೇಶಗಳನ್ನು ಎಲ್ಲಾ ವರ್ಗದ ಮನೆ ಮನಗಳಿಗೆ ಕೊಂಡೊಯ್ಯುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಇಂಬು ಕೊಡಲಿವೆ ಎಂದರು.
ಜಿಲ್ಲೆಯಾದ್ಯಂತ ಸಂಚರಿಸುವ ಜಾಥಾದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಇರಲಿದ್ದು, ಮುಖ್ಯ ಗ್ರಾಮ, ಪಂಚಾಯತಿ ಕೇಂದ್ರ, ಹೋಬಳಿ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಚಿಂತಕರು,ಸಾಹಿತಿಗಳು, ವಾಗ್ಮಿಗಳು ಹಾಗೂ ಅಂಬೇಡ್ಕರರ ಬಗೆಗೆ ಆಳವಾದ ಅಧ್ಯಯನ ಮಾಡಿರುವವರಿಂದ ಭಾಷಣ ಏರ್ಪಡಿಸಲಾಗಿರುತ್ತದೆ ಎಂದರು.
ಜಾಥಾ ಅಂಗವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚಿತ್ರ ರಚನೆ,ಪ್ರಬಂಧ ಸ್ಪರ್ಧೆ ಮುಂತಾದವುಗಳನ್ನು ಜಾಥಾ ಬರುವ ಹಿಂದಿನ ದಿನವೇ ಆಯೋಜಿಸಿ ಕಾರ್ಯಕ್ರಮ ದಿನದಂದು ಬಹುಮಾನ ನೀಡುವ ಮೂಲಕ ಉತ್ತೇಜಿಸಿ, ಮೊದಲ ಸ್ಥಾನ ಪಡೆದವರನ್ನ ಜಿಲ್ಲಾ ಹಂತಕ್ಕೆ ಕಳುಹಿಸಿ ಎಂದರು.
ಜಾಥಾ ಪ್ರವೇಶಿಸುವ ಮಾರ್ಗದ ಗ್ರಾಮಗಳ ಎಲ್ಲಾ ಮನೆಗಳಿಗೂ ಸಂವಿಧಾನ ಪೀಠಿಕೆಯ ಕಾರ್ಡ್‌ಗಳನ್ನು ನೀಡುವ ಮೂಲಕ ಸಂವಿಧಾನ ಪೀಠಿಕೆ ಎಲ್ಲರನ್ನೂ ತಲುಪುವಂತೆ ಪ್ರಯತ್ನಿಸಿ ಎಂದರು.
ಬಾಬಾ ಸಾಹೇಬರ ಅಪರೂಪದ ಚಿತ್ರಗಳು,ವಿಡಿಯೋ ತುಣುಕುಗಳು,ಸಂವಿಧಾನ ರಚನಾ ಸಭೆಯಲ್ಲಿ ನಡೆಸಿರುವ ಚರ್ಚೆಗಳ ವಿಡಿಯೋಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲು ಸೂಚಿಸಿದರು.
ಒಟ್ಟಾರೆಯಾಗಿ ಮಾನ್ಯ ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರು ಪ್ರತಿನಿಧಿಸುವ ಜಿಲ್ಲೆ ನಮ್ಮದಾಗಿರುವುದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ರಾಜ್ಯಮಟ್ಟದಲ್ಲಿ ಬಹುಮಾನ ಬರುವಂತೆ ಕಾರ್ಯಕ್ರಮ ನಡೆಸಲು ಅಧಿಕಾರಿಗಳು ಸಂಘ ಸಂಸ್ಥೆಗಳ ಮುಖಂಡರು ಸಾಥ್ ನೀಡಬೇಕೆಂದರು.
ಸಭೆಯಲ್ಲಿ,ಜಿ.ಪಂ.ಸಿಇಒ ಕೆ.ಎಂ.ಗಾಯತ್ರಿ,ಮೂಡ ಆಯುಕ್ತ ದಿನೇಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಚಂದ್ರಶೇಖರ್, ಪ್ರೊಪೆಸರ್ ಬಸವರಾಜ ದೇವನೂರು,ನರೇಂದ್ರ ಕುಮಾರ್, ಪ್ರೊ ಜೆನ್ನಿ,ಮುಖಂಡರಾದ ಸೋಮಣ್ಣ, ಜವರಯ್ಯ ಮುಂತಾದವರಿದ್ದರು.