ಮನೆ ಅಪರಾಧ ಒಂದು ಕೊಲೆ ಮರೆಮಾಚಲು ಮತ್ತೊಂದು ಕೊಲೆ: ಇಬ್ಬರು ಪ್ರಾಣ ಸ್ನೇಹಿತರ ಹತ್ಯೆ

ಒಂದು ಕೊಲೆ ಮರೆಮಾಚಲು ಮತ್ತೊಂದು ಕೊಲೆ: ಇಬ್ಬರು ಪ್ರಾಣ ಸ್ನೇಹಿತರ ಹತ್ಯೆ

0

ನಿಜಾಮಾಬಾದ್ (ತೆಲಂಗಾಣ): ಒಂದು ಕೊಲೆಯನ್ನು ಮುಚ್ಚು ಹಾಕಲು ಹೋಗಿ ಮತ್ತೊಂದು ಕೊಲೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದ್ದು, ಜೋಡಿ ಕೊಲೆ ಆರೋಪಿಗಳನ್ನು ಬಂಧಿಸಿರುವುದಾಗಿ ನಿಜಾಮಾಬಾದ್ ಪೊಲೀಸರು ತಿಳಿಸಿದ್ದಾರೆ.

Join Our Whatsapp Group

ಮೊಹಮ್ಮದಿಯಾ ಕಾಲೋನಿಯ ಅಮರ್ ಖಾನ್ (33) ಮತ್ತು ರಿಯಾಜ್ ಖಾನ್ (27) ಬಂಧಿತ ಆರೋಪಿಗಳು.

ಕೇವಲ 1,000 ರೂಪಾಯಿಗಾಗಿ ನಡೆದ ಜೋಡಿ ಕೊಲೆ ಇದಾಗಿದ್ದು, ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸಿಪಿ ರಾಜಾ ವೆಂಕಟ್ ರೆಡ್ಡಿ ತಿಳಿಸಿದರು.

ನಿಜಾಮಾಬಾದ್‌ನ ಎಸಿಪಿ ಕಚೇರಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ ಎಸಿಪಿ, ಬಂಧಿತ ಆರೋಪಿಗಳಾದ ಅಮರ್ ಖಾನ್ ಮತ್ತು ರಿಯಾಜ್ ಖಾನ್​ನನ್ನು ಅನುಮಾನದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ಕರೆದು ವಿಚಾರಿಸಿದಾಗ ಇಬ್ಬರೂ ಬಾಯ್ಬಿಟ್ಟಿರುವುದಾಗಿ ತಿಳಿಸಿದರು.

ಬಂಧಿತ ಆರೋಪಿಗಳಾದ ಅಮರ್ ಖಾನ್ ಮತ್ತು ರಿಯಾಜ್ ಖಾನ್, ಆಟೋನಗರದ ಮೊಹಮ್ಮದ್ ಬಹದ್ದೂರ್ (40) ಮತ್ತು ಪಹಾದ್‌ ನಗರದ ವಿಕಲಚೇತನ ಸೈಯದ್ ಯೂಸುಫ್ (44) ಈ ನಾಲ್ವರು ಸ್ನೇಹಿತರಾಗಿದ್ದು, ಸ್ಮಶಾನದಲ್ಲಿ ಶವಗಳನ್ನು ಸುಟ್ಟ ನಂತರ ಬೂದಿಯಲ್ಲಿ ಚಿನ್ನ ಮತ್ತು ಬೆಳ್ಳಿ ಹುಡುಕುವ ಖಯಾಲಿ ಬೆಳೆಸಿಕೊಂಡಿದ್ದರು. ಹಣದ ಅವಶ್ಯಕತೆ ಇದ್ದಾಗಲಲೆಲ್ಲ ಆಗಾಗ್ಗೆ ಅಕ್ಕ-ಪಕ್ಕದ ಸ್ಮಶಾನಗಳಿಗೆ ಹೋಗಿ ಚಿನ್ನಾಭರಣ ಹಾಗೂ ಇತರೆ ಬೆಲೆ ಬಾಳುವ ವಸ್ತು ಹುಡುಕುತ್ತಿದ್ದರು. ಅದರಂತೆ ಜನವರಿ 18 ರಂದು ಆರ್ಮುರ್ ರಸ್ತೆಯ ನಿಜಾಮ್ ಸಾಗರ್ ಕಾಲುವೆಯ ಬಳಿಯಿರುವ ಸ್ಮಶಾನಕ್ಕೆ ವಿಕಲಚೇತನ ಸೈಯದ್ ಯೂಸುಫ್ ಹೊರತು ಮೂವರು ಭೇಟಿ ನೀಡಿದ್ದಾರೆ.

ಚಿನ್ನಾಭರಣದ ಆಸೆಗಾಗಿ ಅಲ್ಲಿ ಇಡೀ ರಾತ್ರಿ ಬೂದಿಯನ್ನು ಸಂಗ್ರಹಿಸಿ ನೀರಿನಲ್ಲಿ ತೊಳೆದು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಎಷ್ಟು ಪ್ರಯತ್ನಿಸಿದರೂ ಏನೂ ಸಿಗದ ಕಾರಣ ಮದ್ಯ ಸೇವಿಸಿ ನಿರಾಸೆಯಲ್ಲಿ ವಾಪಾಸ್​ ಬರುತ್ತಿದ್ದಾಗ ಅವರವರ ನಡುವೆ ಚಿಕ್ಕ ಜಗಳ ನಡೆದಿದೆ. 1,000 ರೂ. ಖರ್ಚು ಮಾಡಿದರೂ ಏನೂ ಸಿಗಲಿಲ್ಲ ಎಂಬ ಹತಾಸೆಯಲ್ಲಿ ಅಮರ್ ಖಾನ್ ಮತ್ತು ರಿಯಾಜ್ ಖಾನ್ ತಾವು ತಂದಿದ್ದ ಕೋಲಿನಿಂದ ಬಹದ್ದೂರ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ತೀವ್ರ ಪೆಟ್ಟಾಗಿದ್ದರಿಂದ ಬಹದ್ದೂರ್ ಸ್ಥಳದಲ್ಲೇ ಮೃತಪಟ್ಟಿದ್ದು, ಆತ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಬಳಿಕ ಅವರ ಮೃತದೇಹವನ್ನು ಪುಲಾಂಗ್ ಕಂದಕಕ್ಕೆ ಎಸೆದಿದ್ದಾರೆ.

ಮರುದಿನ ಬಹದ್ದೂರ್ ಬಗ್ಗೆ ಸ್ನೇಹಿತ ಸೈಯದ್ ಯೂಸುಫ್ ಕೇಳಿದಾಗ ಆರೋಪಿಗಳಾದ ಅಮರ್ ಖಾನ್ ಮತ್ತು ರಿಯಾಜ್ ಖಾನ್ ಆಗ ಏನೋ ಸಮಜಾಯಿಷಿ ಹೇಳಿದ್ದಾರೆ. ಆದರೆ, ಸೈಯದ್ ಬಗ್ಗೆ ಅನುಮಾನ ಹೆಚ್ಚಾಗುತ್ತಿದ್ದಂತೆ ಈತನನ್ನು ಕೊಲೆ ಮಾಡುವ ಆಲೋಚನೆ ಮಾಡಿದ್ದಾರೆ. ಅದರಂತೆ ಜನವರಿ 19 ರಂದು, ಸ್ನಾನದ ನೆಪದಲ್ಲಿ, ಆರೋಪಿಗಳಿಬ್ಬರೂ ಯೂಸುಫ್ ​ನನ್ನು ಬಾಬನ್ಸಾಹೇಬ್ ಪಹಾದ್​ನಲ್ಲಿರುವ ಕೊಳಕ್ಕೆ ಕರೆದೊಯ್ದಿದ್ದಾರೆ. ಸ್ನಾನ ಮಾಡುತ್ತಿರುವಂತೆ ನಟಿಸಿ, ಅವನನ್ನು ಮುಳುಗಿಸಿ, ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇವರ ಒಂದೊಂದೇ ಮಾಹಿತಿ ಹೊರಬಿದ್ದಿದೆ.

ಆರಂಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಪ್ರಕರಣದ ಜಾಡು ಹಿಡಿದು ಹೋದಾಗ ಅಮರ್ ಖಾನ್ ಮತ್ತು ರಿಯಾಜ್ ಖಾನ್ ಮೇಲೆ ಅನುಮಾನ ಬಂದಿದ್ದರಿಂದ ಕರೆದು ವಿಚಾರಿಸಿದಾಗ ಜೋಡಿ ಕೊಲೆ ಪ್ರಕರಣ ಬಹಿರಂಗಗೊಂಡಿದೆ. ಎರಡೂ ಕೊಲೆಯನ್ನು ತಾವೇ ಮಾಡಿರುವುದಾಗಿ ಅಮರ್ ಖಾನ್ ಮತ್ತು ರಿಯಾಜ್ ಖಾನ್ ತಪ್ಪೊಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.