ಮನೆ ಸುದ್ದಿ ಜಾಲ ರಾಮ ಭಕ್ತರಿಗೆ ಮಾತ್ರ ಮಂದಿರ ಉದ್ಘಾಟನೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಹ್ವಾನ ನೀಡದ ಕುರಿತು ಆಚಾರ್ಯ...

ರಾಮ ಭಕ್ತರಿಗೆ ಮಾತ್ರ ಮಂದಿರ ಉದ್ಘಾಟನೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಹ್ವಾನ ನೀಡದ ಕುರಿತು ಆಚಾರ್ಯ ತಿರುಗೇಟು

0

ಅಯೋಧ್ಯೆ: ರಾಮ ಭಕ್ತರಿಗೆ ಮಾತ್ರ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ ಎಂದು ಹೇಳುವ ಮೂಲಕ ಅಹ್ವಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ರಾಮಜನ್ಮಭೂಮಿ ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್‌ ಟಾಂಗ್ ನೀಡಿದ್ದಾರೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, 2024ರ ಜನವರಿ 22ರಂದು ರಾಮಮಂದಿರ ಉದ್ಘಾಟನೆ ನೆರವೇರಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು, ಕೆಲವೊಬ್ಬರಿಗೆ ನೀಡದಿರುವುದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಈ ನಡುವೆಯೇ “ನನಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿಲ್ಲ” ಎಂದು ಶಿವಸೇನೆ ನಾಯಕ ಉದ್ಧವ್‌ ಠಾಕ್ರೆ ಹೇಳಿದ್ದು, ಅವರ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿರುವಂತೆಯೇ ಠಾಕ್ರೆ ಅವರಿಗೆ ರಾಮಜನ್ಮಭೂಮಿ ದೇವಾಲಯದಲ್ಲಿ ಮುಖ್ಯ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್‌ ಅವರು ತಿರುಗೇಟು ನೀಡಿದ್ದು, “ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ” ಎಂದು ಟಾಂಗ್ ನೀಡಿದ್ದಾರೆ.

“ಯಾರು ರಾಮನ ಭಕ್ತರಾಗಿದ್ದಾರೋ ಅವರಿಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಭಗವಾನ್‌ ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬುದಾಗಿ ಹೇಳುವುದು ತಪ್ಪು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲೆಡೆಯೂ ಗೌರವ ಸಿಗುತ್ತಿದೆ. ಅವರು ತಮ್ಮ ಆಡಳಿತದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ರಾಮಮಂದಿರ ನಿರ್ಮಾಣಕ್ಕೂ ಅವರ ಕೊಡುಗೆ ಇದೆ. ಇದು ರಾಜಕೀಯ ಅಲ್ಲ, ರಾಮನ ಮೇಲೆ ಅವರು ಹೊಂದಿರುವ ಭಕ್ತಿ” ಎಂದು ಆಚಾರ್ಯ ಸತ್ಯೇಂದ್ರ ದಾಸ್‌ ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರತಿಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಆದರೆ, ಮಮತಾ ಬ್ಯಾನರ್ಜಿ ಅಥವಾ ಟಿಎಂಸಿಯ ಯಾವುದೇ ಪ್ರತಿನಿಧಿಗಳು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಬಿಜೆಪಿಯು ರಾಜಕೀಯಕ್ಕೆ ಎಳೆದುತಂದಿದೆ. ಇದನ್ನು ಬಿಜೆಪಿಯು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿದೆ. ಹಾಗಾಗಿ ಪಾಲ್ಗೊಳ್ಳದಿರಲು ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅತ್ತ ಸಿಪಿಎಂ ಕೂಡ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಿಂದ ದೂರ ಉಳಿಯಲು ತೀರ್ಮಾನಿಸಿದೆ.