ಮನೆ ಕ್ರೀಡೆ ಏಷ್ಯಾಕಪ್‌ ಟೂರ್ನಿ: ಹಾಂಗ್‌ ಕಾಂಗ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಏಷ್ಯಾಕಪ್‌ ಟೂರ್ನಿ: ಹಾಂಗ್‌ ಕಾಂಗ್‌ ವಿರುದ್ಧ ಭಾರತಕ್ಕೆ ಭರ್ಜರಿ ಜಯ

0

ದುಬೈ (Dubai): ಏಷ್ಯಾಕಪ್ 2022 ಕ್ರಿಕೆಟ್ ಟೂರ್ನಿಯಲ್ಲಿ ಹಾಂಗ್‌ ಕಾಂಗ್‌ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದೆ.

ಭಾರತ ನೀಡಿದ 193 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಹಾಂಗ್ ಕಾಂಗ್ ತಂಡ ನಿಗದಿತ 20 ಓವರ್ ಗಳಲ್ಲಿ 152ರನ್ ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 40 ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಹಾಂಗ್‌ಕಾಂಗ್‌ ತಂಡವು ಸಂಘಟಿತ ದಾಳಿ ಮೂಲಕ ಭಾರತ ತಂಡವು ಬೃಹತ್‌ ಮೊತ್ತವನ್ನು ಪೇರಿಸಲು ಸಾಧ್ಯವಾಗದಂತೆ ತಡೆಯುವ ಪ್ರಯತ್ನ ನಡೆಸಿತು.

ಆದರೆ ಮೂರನೇ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿರಾಟ್‌ ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್‌ ಹಾಂಗ್‌ಕಾಂಗ್‌ ಪ್ರಯತ್ನಕ್ಕೆ ಅನಿರೀಕ್ಷಿತ ತಿರುಗೇಟು ನೀಡಿದರು. ಮೂರು ಸಿಕ್ಸರ್‌ ಒಳಗೊಂಡ ಆಕರ್ಷಕ ಅರ್ಧಶತಕ ಕೊಹ್ಲಿ ಬ್ಯಾಟ್‌ನಿಂದ ಹೊರಹೊಮ್ಮಿತು. ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದ ಸೂರ್ಯಕುಮಾರ್‌ ಕೇವಲ 24 ಎಸೆತಗಳಿಗೆ 6 ಭರ್ಜರಿ ಸಿಕ್ಸರ್‌ ಒಳಗೊಂಡ 68 ರನ್‌ಗಳ ಕೊಡುಗೆ ನೀಡಿದರು.

ಆರಂಭಿಕ ಬ್ಯಾಟರ್‌ಗಳಾದ ಕೆ.ಎಲ್‌.ರಾಹುಲ್‌ ಮತ್ತು ರೋಹಿತ್‌ ಶರ್ಮಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅಬ್ಬರಿಸುವ ಯತ್ನದಲ್ಲಿ ಕ್ರಮವಾಗಿ 36, 21 ರನ್‌ಗಳಿಗೆ ಔಟಾದರು. ರಾಹುಲ್‌ ಬ್ಯಾಟ್‌ನಿಂದ 2 ಸಿಕ್ಸರ್‌ ಮತ್ತು ರೋಹಿತ್‌ ಬ್ಯಾಟ್‌ನಿಂದ 1 ಸಿಕ್ಸರ್‌ ಸಿಡಿಯಿತು. 2 ವಿಕೆಟ್‌ ನಷ್ಟಕ್ಕೆ 192 ರನ್‌ ಪೇರಿಸಿದ ಭಾರತ ಕಠಿಣ ಗೆಲುವಿನ ಗುರಿಯನ್ನು ನೀಡಿತು. ಹಾಂಗ್‌ಕಾಂಗ್‍‌ ಪರ ಆಯುಷ್‌ ಶುಕ್ಲಾ, ಮೊಹಮ್ಮದ್‌ ಘಾಜನ್‌ಫರ್‌ ತಲಾ 1 ವಿಕೆಟ್‌ ಗಳಿಸಿದರು.

ಬೃಹತ್ ಗುರಿಯನ್ನು ಬೆನ್ನಟ್ಟಿದ ಹಾಂಗ್ ಕಾಂಗ್ ಆರಂಭಿಕ ಆಘಾತ ಎದುರಿಸಿತು. 9 ರನ್ ಗಳಿಸಿದ್ದ ಯಾಸಿಮ್ ಮುರ್ತಾಜಾ ಅರ್ಶ್ ದೀಪ್ ಸಿಂಗ್ ಬೌಲಿಂಗ್ ನಲ್ಲಿ ಔಟಾದರು. ಈ ಆಘಾತದಿಂದ ಹಾಂಗ್ ಕಾಂಗ್ ತಂಡವನ್ನು ಬಾಬರ್ ಹಯಾತ್ ತಮ್ಮ ಸಮಯೋಚಿತ ಬ್ಯಾಟಿಂಗ್ ನಿಂದ ಹೊರತಂದರು. ಈ ಹಂತದಲ್ಲಿ 10 ರನ್ ಗಳಿಸಿದ್ದ ನಾಯಕ ನಿಜಾಕತ್ ಖಾನ್ ಔಟಾದರು. ಬಳಿಕ 41 ರನ್ ಗಳಿಸಿದ್ದ ಬಾಬರ್ ಹಯಾತ್ ಕೂಡ ಜಡೇಜಾ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

30 ರನ್ ಗಳಿಸಿದ್ದ ಕಿಂಚಿತ್ ಶಾ, 14ರನ್ ಗಳಿಸಿದ್ದ ಎಜಾಜ್ ಖಾನ್ ಆವೇಶ್ ಖಾನ್ ಬೌಲಿಂಗ್ ನಲ್ಲಿ ಔಟಾದರು. ಅಂತಿಮವಾಗಿ ಹಾಂಗ್ ಕಾಂಗ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152ರನ್ ಗಳಿಲಷ್ಟೇ ಶಕ್ತವಾಯಿತು. ಆ ಮೂಲಕ 40 ರನ್ ಗಳ ಅಂತರದಲ್ಲಿ ಹೀನಾಯ ಸೋಲುಕಂಡಿತು. ಈ ಪಂದ್ಯದ ಜಯದ ಮೂಲಕ ಭಾರತ ಟೂರ್ನಿಯಲ್ಲಿ ಸತತ 2ನೇ ಗೆಲುವು ಸಾಧಿಸಿದಂತಾಗಿದೆ.

ಹಿಂದಿನ ಲೇಖನವ್ಯಾಯಾಮ ಮಾಡುವ ಮೊದಲು ಅನುಸರಿಸಬೇಕಾದ ನಿಯಮ
ಮುಂದಿನ ಲೇಖನಮೈಸೂರು ವಿವಿಯಲ್ಲಿ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ