ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಂತಿಮ ಬಿಕಾಂ ಪದವಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾರಾಟ ಮಾಡುತ್ತಿದ್ದ ಇಬ್ಬರ ವಿದ್ಯಾರ್ಥಿಗಳನ್ನು ಮೈಸೂರು ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ.
ಮೈಸೂರಿನ ನವೀನ್ ಮತ್ತು ಮುರಳೀಧರ ಎಂಬುವರು ಬಂಧಿತರಾಗಿದ್ದು, ಅವರಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿದ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮುಕ್ತ ವಿಶ್ವವಿದ್ಯಾನಿಲಯದ ಅಂತಿಮ ಬಿಕಾಂ ಅಂತಿಮ ವರ್ಷದ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪರೀಕ್ಷೆ ಗುರುವಾರ ಮುಕ್ತ ಗಂಗೋತ್ರಿ ಆವರಣದ ವಿಜ್ಞಾನ ಭವನದಲ್ಲಿ ನಡೆಯಿತು. ಇಂದಿನ ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ಹಣಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ಎಂಬ ಮಾಹಿತಿ ತಿಳಿದು ಚಂದ್ರು ಅವರು ಅಂತಿಮ ಬಿಕಾಂ ವಿದ್ಯಾರ್ಥಿ ಕಷ್ಟಪಟ್ಟು ಓದುವ ತನ್ನಂತಹ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ನೊಂದು, ಅದನ್ನು ತಡೆಯುವ ಸಲುವಾಗಿ ಬುಧವಾರ ಬೆಳಗ್ಗೆ ನವೀನ್ ಮತ್ತು ಮುರಳಿಗೆ ತನಗೂ ಪ್ರಶ್ನೆ ಪತ್ರಿಕೆ ಕೊಡುವಂತೆ ಕೇಳಿದ್ದ.
ಆದರೆ, ಅವರಿಗೆ ಚಂದ್ರು ಬಗ್ಗೆ ನಂಬಿಕೆ ಬಾರದ ಕಾರಣ ನಿರಾಕರಿಸಿದ್ದರು. ಆದರೂ ನಂಬಿಕೆ ಹುಟ್ಟಿಸಿ 3000 ರೂ. ಹಣ ನೀಡಿ ಬುಧವಾರ ರಾತ್ರಿ 9:00 ಗಂಟೆಗೆ ತನ್ನ ಮೊಬೈಲ್ ಗೆ ವಾಟ್ಸಾಪ್ ಮೂಲಕ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆ ಪತ್ರಿಕೆ ಪ್ರತಿ ತರಿಸಿಕೊಂಡ. ಗುರುವಾರ ಬೆಳಗ್ಗೆ 7. ಗಂಟೆಗೆ ನೇರವಾಗಿ ಜಯ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ತೆರಳಿದ ಚಂದ್ರು ನವೀನ್ ಮತ್ತು ಮುರಳಿ ಕಳುಹಿಸಿದ ಪ್ರಶ್ನೆ ಪತ್ರಿಕೆ ಸಮೇತ ಲಿಖಿತ ದೂರ ನೀಡಿ, ನಂತರ ಒಂದು ವಿಜ್ಞಾನ ಭವನದಲ್ಲಿ ನಡೆದ ಪರೀಕ್ಷೆಗೂ ಹಾಜರಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ಕುಮಾರ್ ಹಾಗೂ ಸಿಬ್ಬಂದಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದಾಗ ಕಂಪ್ಯೂಟರ್ ಇನ್ ಬಿಸಿನೆಸ್ ವಿಷಯದ ಪ್ರಶ್ನೆಪತ್ರಿಕೆಯು ಚಂದ್ರು ವಾಟ್ಸಪ್ ಗೆ ಬಂದಿದ್ದ ಪ್ರಶ್ನೆ ಪತ್ರಿಕೆಗೆ ಶೇ. 100 ರಷ್ಟು ಹೋಲಿಕೆಯಾಯಿತು. ಪ್ರಶ್ನೆ ಪತ್ರಿಕೆ ಮಾರಾಟವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಪರೀಕ್ಷೆ ಬರೆಯಲೆಂದು ಬಂದಿದ್ದ ನವೀನ್ ಮತ್ತು ಮುರುಳಿ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಅವರಿಬ್ಬರಿಗೆ ಪ್ರಶ್ನೆ ಪತ್ರಿಕೆ ನೀಡಿದ ಮೂಲ ವ್ಯಕ್ತಿ ಯಾರೆಂಬುದು ಖಚಿತವಾಗದ ಕಾರಣ ಪೋಲಿಸರು ತೀವ್ರ ತನಿಗೆ ನಡೆಸುತ್ತಿದ್ದಾರೆ.