ಮನೆ ಅಪರಾಧ ಎಟಿಎಸ್‌ ನಿಂದ 376 ಕೋಟಿ ರೂ. ಮೌಲ್ಯದ 75 ಕೆ.ಜಿ.ಗೂ ಹೆಚ್ಚು ಹೆರಾಯಿನ್‌ ವಶಕ್ಕೆ

ಎಟಿಎಸ್‌ ನಿಂದ 376 ಕೋಟಿ ರೂ. ಮೌಲ್ಯದ 75 ಕೆ.ಜಿ.ಗೂ ಹೆಚ್ಚು ಹೆರಾಯಿನ್‌ ವಶಕ್ಕೆ

0

ಅಹಮದಾಬಾದ್‌ (Ahmedabad): ಮುಂದ್ರಾ ಬಂದರಿನಲ್ಲಿದ್ದ ಕಂಟೇನರ್‌ ಒಂದರಲ್ಲಿ 376 ಕೋಟಿ ರೂ. ಮೌಲ್ಯದ 75 ಕೆಜಿಗೂ ಹೆಚ್ಚು ಹೆರಾಯಿನ್‌ ಅನ್ನು ಗುಜರಾತ್‌ ಭಯೋತ್ಪಾದನೆ ತಡೆ ಘಟಕವು (ಎಟಿಎಸ್‌) ವಶಪಡಿಸಿಕೊಂಡಿದೆ.

ಅನುಮಾನಾಸ್ಪದವಾದ ಕಂಟೇನರ್ ಒಂದು ಮುಂದ್ರಾ ಬಂದರಿನಲ್ಲಿ ಸುಮಾರು ಎರಡು ತಿಂಗಳುಗಳಿಂದ ಇದೆ ಎಂಬ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಎಟಿಎಸ್‌, ಹೆರಾಯಿನ್‌ ವಶಕ್ಕೆ ಪಡೆದಿದೆ. ಕಂಟೇನರ್‌ನಲ್ಲಿ 4,000 ಕೆ.ಜಿ. ಬಟ್ಟೆ ಇತ್ತು. 450 ಸುರುಳಿಗಳಾಗಿ ಈ ಬಟ್ಟೆಯನ್ನು ಸುತ್ತಲಾಗಿತ್ತು. ಇವುಗಳ ಪೈಕಿ 64 ಸುರುಳಿಗಳ ಒಳಗೆ ಅತ್ಯುತ್ತಮ ಗುಣಮಟ್ಟದ ಹೆರಾಯಿನ್‌ ಅನ್ನು ಅಡಗಿಸಿ ಇರಿಸಲಾಗಿತ್ತು. ಎಕ್ಸ್‌ರೇ ಪರಿಶೀಲನೆ ಸಂದರ್ಭದಲ್ಲಿ ಪತ್ತೆಯಾಗುವುದನ್ನು ತಡೆಯುವುದಕ್ಕೆ ನೀಲಿ ಸೆಲ್ಲೋ ಟೇಪ್‌ನಲ್ಲಿ ಹೆರಾಯಿನ್‌ ಅನ್ನು ಸುತ್ತಿ ಇರಿಸಲಾಗಿತ್ತು.

ಎರಡು ತಿಂಗಳ ಹಿಂದೆಯೇ ಈ ಕಂಟೇನರ್ ಬಂದರು ತಲುಪಿತ್ತು. ಅರಬ್‌ ಸಂಯುಕ್ತ ಸಂಸ್ಥಾನದಿಂದ (ಯುಎಇ) ಬಂದ ಈ ಕಂಟೇನರ್‌ ಅನ್ನು ಪಂಜಾಬ್‌ಗೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಂಜಾಬ್‌ ಪೊಲೀಸರೂ ಭಾಗಿಯಾಗಿದ್ದರು.

ಯುಎಇಯ ಅಜ್ಮಾನ್‌ನಲ್ಲಿರುವ ಗ್ರೀನ್‌ ಫಾರೆಸ್ಟ್‌ ಜನರಲ್‌ ಟ್ರೇಡಿಂಗ್‌ ಎಂಬ ಕಂಪನಿಯಿಂದ ಈ ಕಂಟೇನರ್ ಅನ್ನು ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆದಿದೆ. ಪಶ್ಚಿಮ ಬಂಗಾಳದ ಗಾಂಧಿಧಾಮ್‌ ಎಂಬ ಸಂಸ್ಥೆಯ ಕಚ್‌ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಡೆಲಿವರಿ ಏಜೆಂಟ್‌ ಒಬ್ಬನನ್ನು ಗುರುತಿಸಲಾಗಿದೆ.

ಹಿಂದಿನ ಲೇಖನಸಶಕ್ತ ಪುರುಷ ಪತ್ನಿಯಿಂದ ಶಾಶ್ವತ ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್‌
ಮುಂದಿನ ಲೇಖನಇಂದಿನ ಚಿನ್ನ-ಬೆಳ್ಳಿ ದರದ ವಿವರ