ಹೊಸದಿಲ್ಲಿ : ಪಾಕ್ ಉಗ್ರರ ಒಂಭತ್ತು ನೆಲೆಗಳನ್ನು ಭಾರತೀಯ ಸೇನೆ ಧ್ವಂಸ ಮಾಡಿದ ಹಿನ್ನಲೆ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಕುರಿತು ಗುರುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ನಡೆಯನ್ನು ಬೆಂಬಲಿಸಿದವು.
ಏಪ್ರಿಲ್ ೨೨ ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ, ಹದಿನೈದು ದಿನಗಳಲ್ಲಿ ನಡೆದ ಎರಡನೇ ಸರ್ವಪಕ್ಷಗಳ ಸಭೆಗೂ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಗೈರಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಕುರಿತು ವಿಪಕ್ಷಗಳ ನಾಯಕರಿಗೆ ಸಂಪೂರ್ಣ ವಿವರ ಒದಗಿಸಿದರು.
ಬುಧವಾರ ಮುಂಜಾನೆ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕರ ಶಿಬಿರಗಳನ್ನು ಭಾರತೀಯ ಸಶಸ್ತ್ರ ಪಡೆಗಳು ನಾಶಗೊಳಿಸಿದ್ದವು. ಮುರಿಡ್ಕೆಯಲ್ಲಿನ ಲಷ್ಕರೆ ತೊಯ್ಬಾದ ಮುಖ್ಯ ಕಚೇರಿ ಹಾಗೂ ಬಹವಲ್ಪುರ್ ನಲ್ಲಿನ ಪ್ರಮುಖ ಭಯೋತ್ಪಾದನಾ ತರಬೇತಿ ತಾಣಗಳ ಗುರಿಗಳ ಮೇಲೆ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯ ಕುರಿತು ವಿಪಕ್ಷಗಳ ನಾಯಕರಿಗೆ ಅವರು ಮಾಹಿತಿ ನೀಡಿದರು.
ಈ ವೇಳೆ ಕಾರ್ಯಾಚರಣೆಯ ಉದ್ದೇಶ, ನಿರ್ದಿಷ್ಟ ಭಯೋತ್ಪಾದಕ ಗುರಿಗಳ ಮೇಲೆ ನಡೆದ ದಾಳಿ, ಈ ದಾಳಿಯಿಂದಾಗಲಿರುವ ವ್ಯೂಹಾತ್ಮಕ ಹಾಗೂ ಭದ್ರತಾ ಪರಿಣಾಮಗಳು ಹಾಗೂ ಒಂದು ವೇಳೆ ಪಾಕಿಸ್ತಾನವೇನಾದರೂ ಪ್ರತೀಕಾರದ ಕ್ರಮಕ್ಕೆ ಮುಂದಾದರೆ, ಅದನ್ನು ಎದುರಿಸಲು ಸಜ್ಜಾಗಿರುವ ಭಾರತದ ಸನ್ನದ್ಧತೆಯ ಕುರಿತು ವಿಪಕ್ಷಗಳ ನಾಯಕರಿಗೆ ವಿವರಿಸಲಾಯಿತು.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ನಿನ್ನೆ ನಸುಕಿನ ಜಾವ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದವು, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭದ್ರಕೋಟೆಯಾದ ಬಹಾವಲ್ಪುರ್ ಮತ್ತು ಲಷ್ಕರ್-ಎ-ತೈಬಾದ ನೆಲೆ ಮುರಿಡ್ಕೆ ಸೇರಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ೨೬ ನಾಗರಿಕರ ಹತ್ಯಾಕಾಂಡದ ಎರಡು ವಾರಗಳ ನಂತರ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಯಿತು.
ಆಪರೇಷನ್ ಸಿಂಧೂರ್ ನ್ನು ಸಶಸ್ತ್ರ ಪಡೆಗಳು ಯಶಸ್ವಿಯಾಗಿ ನಿರ್ವಹಿಸಿವೆ. ಸರ್ಕಾರವು ಅದರ ಬಗ್ಗೆ ಬಹಳ ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯವರ ಉದ್ದೇಶಗಳು ಈಗಾಗಲೇ ಜಗತ್ತಿಗೆ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ವಿಭಜನೆಯಾಗಬಾರದು ಎಂದು ಪ್ರಧಾನಿ ಬಯಸುತ್ತಾರೆ. ಪ್ರತಿಯೊಬ್ಬ ಭಾರತೀಯರೂ ಒಂದಾಗಬೇಕಾದ ಪರಿಸ್ಥಿತಿ ಇದು ಎಂದು ಹೇಳಿದರು.
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಎಸ್. ಜೈಶಂಕರ್, ಜೆಪಿ ನಡ್ಡಾ ಮತ್ತು ನಿರ್ಮಲಾ ಸೀತಾರಾಮನ್ ಸರ್ಕಾರವನ್ನು ಪ್ರತಿನಿಧಿಸಿದರೆ, ಕಾಂಗ್ರೆಸ್‌ನಿಂದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್‌ನ ಸಂದೀಪ್ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿ.ಆರ್. ಬಾಲು, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಎಎಪಿಯ ಸಂಜಯ್ ಸಿಂಗ್, ಶಿವಸೇನೆಯ (ಯುಬಿಟಿ) ಸಂಜಯ್ ರಾವತ್, ಎನ್‌ಸಿಪಿ (ಎಸ್‌ಪಿ) ಯ ಸುಪ್ರಿಯಾ ಸುಲೆ, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ಸಿಪಿಐ (ಎಂ) ನ ಜಾನ್ ಬ್ರಿಟ್ಟಾಸ್, ಜೆಡಿ(ಯು) ನಾಯಕ ಸಂಜಯ್ ಝಾ, ಕೇಂದ್ರ ಸಚಿವ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ನಾಯಕ ಚಿರಾಗ್ ಪಾಸ್ವಾನ್ ಮತ್ತು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸಭೆಯಲ್ಲಿ ಭಾಗವಹಿಸಿದ್ದರು.














