ಮನೆ ಸುದ್ದಿ ಜಾಲ ಚಳಿಗಾಲದ ಅಧಿವೇಶನ ಆರಂಭದಲ್ಲೇ ವಿಪಕ್ಷಗಳಿಂದ ಗದ್ದಲ, ಪ್ರತಿಭಟನೆ – ಕಲಾಪ ಮುಂದೂಡಿಕೆ..!

ಚಳಿಗಾಲದ ಅಧಿವೇಶನ ಆರಂಭದಲ್ಲೇ ವಿಪಕ್ಷಗಳಿಂದ ಗದ್ದಲ, ಪ್ರತಿಭಟನೆ – ಕಲಾಪ ಮುಂದೂಡಿಕೆ..!

0

ನವದೆಹಲಿ : ಚಳಿಗಾಲದ ಅಧಿವೇಶನ ಆರಂಭದಲ್ಲೇ ಲೋಕಸಭೆಯಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಿದ ಪರಿಣಾಮ ಮಧ್ಯಾಹ್ನದ ವರೆಗೆ ಕಲಾಪ ಮುಂದೂಡಲಾಗಿದೆ. ಇಂದಿನಿಂದ ಸಂಸತ್‌ ಅಧಿವೇಶನ ಶುರುವಾಗಿದ್ದು, ಡಿ.19ರಂದು ಮುಕ್ತಾಯಗೊಳ್ಳಲಿದೆ.

ಲೋಕಸಭೆ ಕಲಾಪದ ಆರಂಭದಲ್ಲಿ ವಿಶ್ವಕಪ್‌ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಹಾಗೂ ಅಂಧರ ಮಹಿಳಾ ಕ್ರಿಕೆಟ್‌ ಮತ್ತು ಕಬಡ್ಡಿ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಇದಾದ ಬಳಿಕ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆ, ವಿಪಕ್ಷಗಳು ಎಸ್‌ಐಆರ್‌ ಹಾಗೂ ವೋಟ್‌ ಚೋರಿ ಕುರಿತು ಚರ್ಚಿಸಲು ಆಗ್ರಹಿಸಿ ಗದ್ದಲ ಸೃಷ್ಟಿಸಿದವು, ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು.

ಈ ವೇಳೆ ಸ್ಪೀಕರ್‌ ಓಂ ಬಿರ್ಲಾ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ರು. ಸದನವು ಚರ್ಚೆ ಮತ್ತು ಸಂವಾದಗಳಿಗೆ ಪೂರಕವಾಗಿ ಕೆಲಸ ಮಾಡಲಿ ಎಂದು ಹೇಳಿದ್ರು. ಆದ್ರೆ ಸ್ಪೀಕರ್‌ ಮಾತನ್ನು ಲೆಕ್ಕಿಸದೇ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಾ, ಘೋಷಣೆ ಕೂಗಿದವು. ಈ ಹಿನ್ನೆಲೆ ಸ್ಪೀಕರ್‌ ಕಲಾಪವನ್ನು ಮುಂದೂಡಿದರು.

ಇತ್ತ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಕಲಾಪ ಆರಂಭಗೊಂಡಿತು. ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ನಿಧನರಾದ ರಾಜಸ್ಥಾನದ ಬಿಕಾನೇರ್‌ನ ಮಾಜಿ ಸಂಸದರಾದ ಧರ್ಮೇಂದ್ರ, ಮಾಜಿ ಕೇಂದ್ರ ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಇತರ ಗಣ್ಯರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ರಾಜ್ಯಸಭೆಯ ಅಧ್ಯಕ್ಷರ ಅಧ್ಯಕ್ಷತೆಯನ್ನ ಸಿ.ಪಿ ರಾಧಾಕೃಷ್ಣನ್ ವಹಿಸಿದ್ದಾರೆ. ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಅವರಿಗೆ ಇದು ಮೊದಲ ಸಂಸತ್‌ ಅಧಿವೇಶನವೂ ಆಗಿದೆ.