ನವದೆಹಲಿ : ವಿಪಕ್ಷಗಳು ಸೋಲಿನ ಹತಾಶೆ ನಿವಾರಿಸಿಕೊಳ್ಳಬೇಕು ಮತ್ತು ಸಂಸತ್‌ನಲ್ಲಿ ಬಲವಾದ ಸಮಸ್ಯೆಗಳನ್ನು ಎತ್ತುವ ಮೂಲಕ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.
ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಡಿ.19ರಂದು ಕೊನೆಗೊಳ್ಳಲಿದೆ. 18ನೇ ಲೋಕಸಭೆಯ 6ನೇ ಅಧಿವೇಶನ ಮತ್ತು ರಾಜ್ಯಸಭೆಯ 269ನೇ ಅಧಿವೇಶ ಆರಂಭವಾಗುವುದಕ್ಕೆ ಮುನ್ನ ಸಂಸತ್ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳಿಗೆ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ನೆನಪಿಸಿದರು.
ಭಾರತ ಪ್ರಜಾಪ್ರಭುತ್ವ ನೀಡಬಲ್ಲದು ಎಂಬುದನ್ನ ಸಾಬೀತುಪಡಿಸಿದೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡುವ ಪ್ರಯತ್ನಗಳಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲು ಈ ಅಧಿವೇಶನ ಒಂದು ಅವಕಾಶ. ಹಾಗಾಗಿ ಪ್ರತಿಪಕ್ಷಗಳು ಸೋಲಿತ ಹತಾಶೆಯನ್ನ ಬಿಟ್ಟು ಬಲವಾದ ಸಮಸ್ಯೆಗಳನ್ನ ಎತ್ತಬೇಕು. ಸೋಲಿನ ಹತಾಶೆ ಅಥವಾ ಗೆಲುವಿನ ದುರಹಂಕಾರಕ್ಕೆ ವೇದಿಕೆಯಾಗಬಾರದು. ಹೊಸ ಪೀಳಿಯು ಈ ಸಂಸತ್ತಿನ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ನೀತಿಗೆ ಸಕಾರಾತ್ಮಕತೆ ಅತ್ಯಗತ್ಯ. ಈ ಅಧಿವೇಶನವು ದೇಶದ ಬಗ್ಗೆ ಏನು ಯೋಚಿಸುತ್ತದೆ? ದೇಶಕ್ಕಾಗಿ ಅದು ಏನು ಮಾಡಲು ಬಯಸುತ್ತದೆ ಎಂಬುದರ ಮೇಲೆ ಕೇಂದ್ರೀಕರಿಸಬೇಕು. ಹಾಗಾಗಿ ಸದನದಲ್ಲಿ ಯಾವುದೇ ನಕಾರಾತ್ಮಕತೆ ಇರಬಾರದು. ಪ್ರತಿಪಕ್ಷಗಳು ತಮ್ಮ ಕಾರ್ಯತಂತ್ರವನ್ನ ಬದಲಾಯಿಸಿ, ಜವಾಬ್ದಾರಿಯನ್ನ ಪೂರೈಸಬೇಕು ಎಂದು ಕರೆ ನೀಡಿದರಲ್ಲದೇ, ತಮ್ಮ ಸೋಲನ್ನು ಇಂದಿಗೂ ಒಪ್ಪಿಕೊಳ್ಳಲು ಸಾಧ್ಯವಾಗದ ಕೆಲವು ಪಕ್ಷಗಳಿವೆ ಎಂದು ಕುಟುಕಿದರು.
ಸಾರ್ವಜನಿಕ ಪ್ರತಿನಿಧಿಗಳಾಗಿ, ಭವಿಷ್ಯದ ಬಗ್ಗೆ ಯೋಚಿಸುವಾಗ ನಾವು ದೇಶದ ಜನರ ಜವಾಬ್ದಾರಿ ಮತ್ತು ನಿರೀಕ್ಷೆಗಳನ್ನು ಅತ್ಯಂತ ಸಮತೋಲನ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು. ಸಂಸತ್ತಿನ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಡಿ.19ರವರೆಗೆ ಮುಂದುವರಿಯಲಿದೆ. ಎರಡೂ ಸದನಗಳು ತಲಾ 15 ಕಲಾಪಗಳನ್ನು ನಡೆಸಲಿದ್ದು, ಒಟ್ಟು 14 ಮಸೂದೆಗಳನ್ನ ಮಂಡಿಸುವ ನಿರೀಕ್ಷೆಯಿದೆ.














