ಮನೆ ಅಪರಾಧ ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅನಧಿಕೃತ ಕ್ಯಾಂಟೀನ್ ತೆರವುಗೊಳಿಸಲು ಆದೇಶ

ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅನಧಿಕೃತ ಕ್ಯಾಂಟೀನ್ ತೆರವುಗೊಳಿಸಲು ಆದೇಶ

0

ಮೈಸೂರು: ಕರ್ನಾಟಕ ಸಾರ್ವಜನಿಕ ಆವರಣಗಳ ಸಕ್ಷಮ ಪ್ರಾಧಿಕಾರಗಳ ಜಿಲ್ಲಾ ನ್ಯಾಯಾಲಯವು ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಅವಧಿ ಮೀರಿದ ನಂತರವೂ, ಅಕ್ರಮವಾಗಿ ನಡೆಸುತ್ತಿದ್ದ  ಕ್ಯಾಂಟೀನ್ ಅನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ.

Join Our Whatsapp Group

ಕಾಲೇಜು ಪ್ರಾಂಶುಪಾಲರಾದ ಡಾ.ರವಿ. ಡಿ ಮತ್ತು ಸರ್ಕಾರಿ ವಕೀಲರಾದ ಉಮೇಶ್ ಕುಮಾರ್ ಅವರ ಸತತ ಕಾನೂನು ಹೋರಾಟದ ‌ಫಲವಾಗಿ ವಿದ್ಯಾರ್ಥಿ ಪರವಾದ ಆದೇಶ ಬಂದಿದೆ.

ಕಾಲೇಜಿ‌ನಲ್ಲಿ ಪ್ರತೀ ಮಾಹೆ 7100 ರೂಪಾಯಿ ಬಾಡಿಗೆಯಂತೆ ಮತ್ತು 21,300 ರೂಪಾಯಿ ಭದ್ರತಾ ಠೇವಣಿಯಂತೆ ಕ್ಯಾಂಟೀನ್  ನಡೆಸಲು  2017 ರಿಂದ 2022 ರವರೆಗೆ ಕರಾರು ಮಾಡಿಕೊಳ್ಳಲಾಗಿತ್ತು. ಆದರೆ 58 ತಿಂಗಳ ಬಾಡಿಗೆ ಬದಲಿಗೆ ಕೇವಲ 26 ತಿಂಗಳ ಬಾಡಿಗೆ ನೀಡಲಾಗಿತ್ತು. ಅಲ್ಲದೇ, 52 ತಿಂಗಳ ವಿದ್ಯುತ್ ಬಿಲ್ ಆದ 2.6 ಲಕ್ಷವನ್ನು ಪಾವತಿಸದೆ ಕರಾರು ಉಲ್ಲಂಘನೆ ‌ಮಾಡಲಾಗಿತ್ತು.

ವಿಧಿಸಿದ ಷರತ್ತುಗಳ ಅನ್ವಯ ಪ್ರಾಂಶುಪಾಲರ ನಿರ್ಧಾರವೇ ಅಂತಿಮ. ಆದರೆ, ಇದನ್ನು ಮರೆಮಾಚಿ ಬಾಡಿಗೆದಾರರಾದ ಪ್ರಭಾವತಿ ಎಚ್. ಪಿ. ಅವರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ, ನ್ಯಾಯಾಲಯದ ಆದೇಶದ ನಡುವೆಯೂ ಒಪ್ಪಂದ ಉಲ್ಲಂಘಿಸಿ ಹಸ್ತಾಂತರ ಮಾಡಿರಲಿಲ್ಲ. ಜತೆಗೆ, ಕೋವಿಡ್-19 ರ ಕಷ್ಟದ ಸಮಯದಲ್ಲಿ ವಿನಾಯಿತಿ ನೀಡಿದ್ದರೂ ವಿನಾಕಾರಣ ಹಸ್ತಾಂತರ ಮಾಡದೆ ತೊಂದರೆ ನೀಡಿದ್ದರು.

ಈ ವಿಷಯವನ್ನು ಮನಗಂಡ ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅನುಭವದಾರರನ್ನು ಒಕ್ಕಲೆಬ್ಬಿಸುವ ಕಾಯಿದೆ 1974 ರ ಸಕ್ಷಮ ಪ್ರಾಧಿಕಾರಗಳ ನ್ಯಾಯಾಲಯವು, ಪ್ರಕರಣವನ್ನು ಇತ್ಯರ್ಥಪಡಿಸಿ ಕ್ಯಾಂಟೀನ್ ನ ಬಾಡಿಗೆದಾರರಾದ ದೇವರಾಜ ಮೋಹಲ್ಲಾದ ಗರಡಿ ರಸ್ತೆ ನಿವಾಸಿ ಪ್ರಭಾವತಿ ಎಚ್.ಪಿ ಅವರಿಗೆ ಕಾಲೇಜ್ ಕ್ಯಾಂಟೀನ್ ಅನ್ನು ತತ್ ಕ್ಷಣವೇ ತೆರವುಗೊಳಿಸಿ ಬಾಡಿಗೆ ಬಾಕಿ, ರೂಪಾಯಿ 2,43,800

ಮತ್ತು ವಿದ್ಯುತ್ ಹಾಗೆಯೇ ನೀರಿನ ಬಾಕಿ, ರೂಪಾಯಿ 2,60,000, ಅಂದರೆ ಒಟ್ಟು  ರೂಪಾಯಿ 5,03,800 ಮೊತ್ತವನ್ನು ಕೂಡಲೇ ಪಾವತಿಸುವುದಲ್ಲದೇ, ಜಾಗದಿಂದ ಕೂಡಲೇ ತೆರವು ಮಾಡುವಂತೆ ನ್ಯಾಯಾದೀಶರು ಆದೇಶ ನೀಡಿದ್ದಾರೆ.