ಮನೆ ಕಾನೂನು ಲೈಸೆನ್ಸ್ ಇಲ್ಲದ ಚಾಲಕನ ಅಪಘಾತಕ್ಕೆ ಮಾಲೀಕನೇ ಹೊಣೆ: ಹೈಕೋರ್ಟ್

ಲೈಸೆನ್ಸ್ ಇಲ್ಲದ ಚಾಲಕನ ಅಪಘಾತಕ್ಕೆ ಮಾಲೀಕನೇ ಹೊಣೆ: ಹೈಕೋರ್ಟ್

0

ವಿಮೆ ಹೊಂದಿರುವ ವಾಹನವನ್ನು ಲೈಸೆನ್ಸ್ ಹೊಂದಿರದ ಚಾಲಕ ಚಲಾಯಿಸಿದಾಗ ಅಪಘಾತ ಸಂಭವಿಸಿದರೆ, ವಿಮಾ ಸಂಸ್ಥೆ ಮೊದಲು ಸಂತ್ರಸ್ತರಿಗೆ ಪರಿಹಾರ ನೀಡಬೇಕು. ನಂತರ ಅಪಘಾತಕ್ಕೆ ಕಾರಣವಾದ ವಾಹನದ ಮಾಲೀಕರಿಂದ ಪರಿಹಾರದ ಮೊತ್ತವನ್ನು ವಸೂಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

Join Our Whatsapp Group

ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಅಪಘಾತದ ಬಳಿಕ ಕೂಡಲೇ ಪರಿಹಾರ ನೀಡಲು ವಾಹನದ ಮಾಲೀಕನಿಗೆ ಸಾಧ್ಯವಾಗದಿರಬಹುದು. ಹೀಗಾಗಿ ಮೊದಲು ವಿಮಾ ಸಂಸ್ಥೆಗಳು ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು. ನಂತರ ವಾಹನದ ಮಾಲೀಕನಿಂದ ಅದನ್ನು ವಸೂಲಿ ಮಾಡಿಕೊಳ್ಳಬೇಕು ಎಂದು ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: 2009ರ ಜೂನ್ 30ರಂದು ಟಾಟಾ ಸುಮೊ ವಾಹನದಲ್ಲಿ ಬಿ.ಎಸ್.ವಿಜಯ್ ಕುಮಾರ್ ಎಂಬುವರು ಮೈಸೂರು – ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಬಿಡದಿ ಬಳಿ ಟಿಪ್ಪರ್ ಹಿಂದಿಕ್ಕಲು ವೇಗವಾಗಿ ಬಂದ ಲಾರಿ ಟಾಟಾ ಸುಮೊಗೆ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ವಿಜಯ ಕುಮಾರ್ ಸೇರಿದಂತೆ ಟಾಟಾ ಸುಮೋದಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರು ವಾಹನ ನ್ಯಾಯಾಧೀಕರಣ ಟಿಪ್ಪರ್ ಹಾಗೂ ಲಾರಿಯ ತಪ್ಪಿನಿಂದ ಅಪಘಾತ ನಡೆದಿದೆ ಎಂದು ತೀರ್ಮಾನಿಸಿ, ವಿಜಯ್ ಕುಮಾರ್ ಕುಟುಂಬಕ್ಕೆ ವಾರ್ಷಿಕ ಶೇ.6ರಷ್ಟು ಬಡ್ಡಿ ದರಲ್ಲಿ 13,03, 200 ರೂ. ಪರಿಹಾರ ನೀಡುವಂತೆ ಟಿಪ್ಪರ್ ಮತ್ತು ಲಾರಿಗೆ ವಿಮಾ ಸೌಲಭ್ಯ ನೀಡಿದ್ದ ಕಂಪನಿಗಳಿಗೆ 2013ರ ಜುಲೈ 6 ರಂದು ಆದೇಶಿಸಿತ್ತು. ಹೆಚ್ಚಿನ ಪರಿಹಾರ ಕೋರಿ ವಿಜಯ್ ಕುಮಾರ್ ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ತೀರ್ಪು

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ , ಅಪಘಾತ ಸಂಭವಿಸಿದ ದಿನದಂದು ಟಿಪ್ಪರ್ ಮತ್ತು ಲಾರಿ ವಿಮಾ ಸೌಲಭ್ಯ ಹೊಂದಿದ್ದವು. ಆದರೆ ಟಿಪ್ಪರ್ ಚಲಾಯಿಸಿದ ಚಾಲಕನು, ಅಧಿಕೃತ ಡ್ರೈವಿಂಗ್ ಲೈಸೆನ್ಸ್ ಹೊಂದಿರಲಿಲ್ಲ. ವಿಮಾ ಪಾಲಿಸಿ ನಿಯಮಗಳ ಪ್ರಕಾರ ಇಂತಹ ಪ್ರಕರಣದಲ್ಲಿ ಅಪಘಾತಕ್ಕೆ ಕಾರಣವಾದ ವಾಹನ ಮಾಲೀಕನೇ ಪರಿಹಾರ ನೀಡಬೇಕಾಗುತ್ತದೆ. ಆದರೆ ತಕ್ಷಣಕ್ಕೆ ಪರಿಹಾರವನ್ನು ವಾಹನದ ಮಾಲೀಕನಿಗೆ ಕೊಡಲು ಸಾಧ್ಯ ಇರುವುದಿಲ್ಲ. ಆದ್ದರಿಂದ ವಿಮಾ ಕಂಪನಿಯೇ ಮೊದಲು ಅಪಘಾತದಿಂದ ಮೃತಪಟ್ಟ ವ್ಯಕ್ತಿಗೆ ಪರಿಹಾರ ಪಾವತಿಸಬೇಕು. ಆ ನಂತರ ಅಪಘಾತಕ್ಕೆ ಕಾರಣವಾದ ವಾಹನದ ಮಾಲೀಕನಿಂದ ವಸೂಲಿ ಮಾಡಬೇಕೆಂದು ಹೈಕೋರ್ಟ್ ಆದೇಶಿಸಿದೆ.

ಇದೇ ವೇಳೆ ನ್ಯಾಯಾಧೀಕರಣದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್, ಅಪಘಾತ ದಿನದ ವೇಳೆಗೆ ಮೃತ ವ್ಯಕ್ತಿಯ ವಯಸ್ಸು ಮತ್ತು ಪಡೆಯುತ್ತಿದ್ದ ಸಂಬಳ ಪರಿಗಣಿಸಿ ಪರಿಹಾರ ಮೊತ್ತವನ್ನು 13,03,200 ರೂ ನಿಂದ 24,84,200 ರೂ.ಗೆ ಹೆಚ್ಚಿಸಿದೆ. ಈ ಪರಿಹಾರ ಮೊತ್ತವನ್ನು ವಾರ್ಷಿಕ ಶೇ.6ರ ಬಡ್ಡಿ ದರದೊಂದಿಗೆ ಲಾರಿ ಮತ್ತು ಟಿಪ್ಪರ್’ಗೆ ವಿಮೆ ನೀಡಿರುವ ಕಂಪನಿಗಳು ಸಂತ್ರಸ್ತ ಕುಟುಂಬಕ್ಕೆ ಪಾವತಿಸಬೇಕು. ಆ ಮೊತ್ತವನ್ನು ಎರಡು ವಿಮಾ ಕಂಪನಿಗಳು ಸಮಾನವಾಗಿ ಭರಿಸಬೇಕು. ನಂತರ ಅಪಘಾತಕ್ಕೆ ಕಾರಣವಾದ ವಾಹನ ಮಾಲೀಕರಿಂದ ಪರಿಹಾರ ಮೊತ್ತವನ್ನು ವಸೂಲಿ ಮಾಡಬೇಕೆಂದು ಆದೇಶಿಸಿದೆ.