ಮಡಿಕೇರಿ(Madikeri): ಬಿಜೆಪಿಯವರಿಗೆ ಪಾದಯಾತ್ರೆಗಳು ಹೊಸದಲ್ಲ. ನಮ್ಮ ಹಲವು ಯಾತ್ರೆಗಳನ್ನು ಕಾಂಗ್ರೆಸ್ ಕಾಪಿ ಮಾಡುತ್ತಿದೆ. ಅವರು ಮತಕ್ಕಾಗಿ ಯಾತ್ರೆ ಆರಂಭಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅನ್ನು ಮುಸ್ಲಿಮರು ಬಿಡುವುದಿಲ್ಲ ಎಂದುಕೊಂಡಿದ್ದರು. ಆದರೆ ಮುಸ್ಲಿಮರು ಕಾಂಗ್ರೆಸ್ ಬಿಡಲು ಶುರು ಮಾಡಿರುವುದರಿಂದ ಯಾತ್ರೆಯಲ್ಲಿ ಆರ್‌ಎಸ್ಎಸ್ ಮತ್ತು ಸಾವರ್ಕರ್ ಅವರನ್ನು ಬೈಯಲು ಶುರು ಮಾಡಿದ್ದಾರೆ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ಜನರು ವಾಲ್ಮೀಕಿ ಭಾವಚಿತ್ರ ಇಟ್ಟುಕೊಂಡಿದ್ದರೂ ಗೌರವ ಸಮರ್ಪಿಸಲು ರಾಹುಲ್ ಗಾಂಧಿ ಮಾತ್ರವಲ್ಲ ಕನಿಷ್ಠ ರಾಜ್ಯದ ಕಾಂಗ್ರೆಸ್ ನಾಯಕರು ಬರಲಿಲ್ಲ. ಇದು ವಾಲ್ಮೀಕಿ ಅವರಿಗೆ ಮಾಡಿದ ಅವಮಾನ ಎಂದು ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಯಾತ್ರೆಯಲ್ಲಿ ನನ್ನ ಮಗ ಒಂಟಿ ಆಗುತ್ತಾನೆ ಎಂದು ಸೋನಿಯಾ ಗಾಂಧಿ ಬಂದರು. ಮುಂದೆ ಜನರು ಅವರಿಗೆ ಉತ್ತರ ನೀಡಿ ಭಾರತ್ ಜೋಡೊ ಅಲ್ಲ ಭಾರತ್ ಛೋಡೊ ಎಂದು ಹೇಳುತ್ತಾರೆ ಎಂದರು.
ಕಾಂಗ್ರೆಸ್‌ನವರಿಗೆ ಚಹಾ ಅಂಗಡಿ ಹೇಗಿರುತ್ತೆ ಅಂತ ಗೊತ್ತಿರಲಿಲ್ಲ. ಮಕ್ಕಳು ಹೇಗೆ ಬೆಳೆಯುತ್ತವೆ ಎನ್ನುವುದು ಗೊತ್ತಿರಲಿಲ್ಲ. ಅವರು ಈಗ ಎಲ್ಲವನ್ನು ನೋಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.