ಕಲಬುರಗಿ: ಬರಗಾಲದಿಂದ ತತ್ತರಿಸಿರುವ ರೈತರಿಗೆ ಗಾಯದ ಮೇಲೆ ಗೆರೆ ಎಳೆದಂತೆ ಪಹಣಿ ದರ 10 ರೂ ಇದ್ದಿರುವುದನ್ನು ಒಮ್ಮೆಲೆ 25 ರೂ.ಗೆ ಹೆಚ್ಚಳ ಮಾಡಿರುವುದನ್ನು ಕೇಳಿದ ವಿಪಕ್ಷ ನಾಯಕ ಆರ್. ಅಶೋಕ್ ಗಾಬರಿಯಾದರು.
ಜಿಲ್ಲೆಯ ಕಡಗಂಚಿ ಗ್ರಾಮದಲ್ಲಿ ಬರಗಾಲ ವೀಕ್ಷಿಸಿ ರೈತರೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ರೈತರೊಬ್ಬರು ಸರ್ಕಾರ ರಾತ್ರೋರಾತ್ರಿ ಪಹಣಿ ದರ 10 ಇದ್ದಿರುವುದನ್ನು 25 ರೂ.ಹೆಚ್ಚಿಸಲಾಗಿದೆ. ಚಿಲ್ಲರೆಯಿಲ್ಲ ಎಂದು 30 ರೂ ಪಡೆಯಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪಹಣಿ ದರ ಮೂರು ಪಟ್ಟು ಹೆಚ್ಚಳವಾಗಿದೆ. ಪ್ರತಿಯೊಂದಕ್ಕೂ ಪಹಣಿ ಕೇಳಲಾಗುತ್ತಿದೆ. ಹೀಗಾಗಿ ಪಹಣಿ ದರ ಹೆಚ್ಚಳ ವಾಪಸಾತಿ ಪಡೆಯುವಂತಾಯಿತು ವಿಪಕ್ಷ ನಾಯಕರಿಗೆ ಆಗ್ರಹಿಸಿದರು.
ಪಹಣಿ ದರ ಹೆಚ್ಚಳವಾಗಿರುವುದನ್ನು ಕೇಳಿ ಗಾಬರಿಯಾದ ವಿಪಕ್ಷ ನಾಯಕ ಅಶೋಕ, ದರ ಯಾವಾಗ ಹೆಚ್ಚಳ ಮಾಡಲಾಗಿದೆ ಎಂದು ಸ್ಥಳದಲ್ಲಿದ್ದ ಆಳಂದ ತಹಶಿಲ್ದಾರ್ ಅವರನ್ನು ಕರೆದು ಕೇಳಿದರು. ಹೌದು ಸರ್, ಈಗಷ್ಟೇ ಪಹಣಿ ದರ ಹೆಚ್ಚಳವಾಗಿದೆ ಎಂದರು. ಪಹಣಿ ದರ ಹೆಚ್ಚಳ ಮಾಡಿರುವ ಬಗ್ಗೆ ಆದೇಶ ಹೊರಡಿಸಲಾಗಿದೆಯೇ ಎಂಬುದರ ಕುರಿತು ಸಂಜೆಯೊಳಗೆ ಆದೇಶ ಪ್ರತಿ ನೀಡಿ ಎಂದರು.
ಎಲ್ಲದಕ್ಕೂ ಪಹಣಿ ಕೇಳಲಾಗುತ್ತಿದೆ. ಮೊದಲೇ ವ್ಯಾಪಕ ಬರಗಾಲ ಆವರಿಸಿದೆ. ಹಿಂಗಾರು- ಮುಂಗಾರು ಕೈ ಕೊಟ್ಟಿದ್ದರಿಂದ ಮುಂದೇನು? ಎಂಬ ಚಿಂತೆ ಎದುರಾಗಿದೆ. ಹೀಗಾಗಿ ದರ ಹೆಚ್ಚಳ ಮಾಡಿರುವುದನ್ನು ವಾಪಸಾತಿ ಮಾಡುವಂತೆ ಬರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಸರ್ಕಾರಕ್ಕೆ ಒತ್ತಾಯಿಸಬೇಕೆಂದರು.
ಪಹಣಿ ದರ ಹೆಚ್ಚಳವಾಗಿದ್ದೆ ತಮ್ಮ ಗಮನಕ್ಕಿಲ್ಲ. ವಿದ್ಯುತ್ ಸಮಸ್ಯೆ ನಿವಾರಿಸಲು ಸರ್ಕಾರ ಮುಂದಾಗುತ್ತಿಲ್ಲ. ಟಿಸಿ ದುರಸ್ತಿಗೆ ಹಣ ಕೇಳಲಾಗುತ್ತಿದೆ. ಕೃಷಿ ಸಮ್ಮಾನ ನಿಧಿ ಪರಿಹಾರ ಬಂದ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.