ಬೆಂಗಳೂರು: ರಾಜ್ಯ ಸರ್ಕಾರ ನುಡಿದಂತೆ ನಡೆದು, ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅನುಕೂಲವಾಗಿವೆ. ಈ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಶ್ಲಾಘಿಸಿದರು.
ಇಂದಿನಿಂದ ಫೆ.23ರ ವರೆಗೆ ವಿಧಾನ ಮಂಡಲ ಬಜೆಟ್ ಅಧಿವೇಶನ ಆರಂಭವಾಗಿದೆ. ಕರ್ನಾಟಕ ವಿಧಾನ ಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮೊದಲ ದಿನ ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿದರು.
ಸರ್ಕಾರ ಪಂಚ ಗ್ಯಾರಂಟಿಗಳಾದ ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗನ್ನು ಅನುಷ್ಠಾನಗೊಳಿಸಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಜನರ ಜೀವನ ಮಟ್ಟ ಸುಧಾರಿಸಿ, ಮಧ್ಯಮ ವರ್ಗದ ಸ್ಥಿತಿಗೆ ತಲುಪುತ್ತಿದ್ದಾರೆ. ಈ ಯೋಜನೆಗಳು ಎರಡು ಕೋಟಿಗೂ ಹೆಚ್ಚು ಕುಟುಂಬಗಳಿಗೆ ಸಹಾಯಕವಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು.
ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.
ರಾಜ್ಯಪಾಲರನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದರು. ವಿಧಾನಸಭೆ ಸ್ಪೀಕರ್ ಯುಟಿ ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಇತರರು ಹಾಜರಿದ್ದರು.