ಮನೆ ರಾಜ್ಯ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಬಸವ ಜಯಮೃತ್ಯುಂಜಯ ಶ್ರೀ

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಾತ್ಕಾಲಿಕ ವಿರಾಮ: ಬಸವ ಜಯಮೃತ್ಯುಂಜಯ ಶ್ರೀ

0

ಬೆಂಗಳೂರು: ನಗರದ ಸ್ವತಂತ್ರ್ಯ ಉದ್ಯಾನದಲ್ಲಿ 2ಎ ಮೀಸಲಾತಿಗಾಗಿ ಆಗ್ರಹಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಸಮುದಾಯದ ಹೋರಾಟ ಅಂತ್ಯಗೊಂಡಿದೆ.

ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ 2ಡಿ ಅಡಿಯಲ್ಲಿ ಶೇ.7ರಷ್ಟು ಮೀಸಲಾತಿಯನ್ನು ನೀಡಿ ಆದೇಶ ಹೊರಡಿಸಿದೆ. ಆದರೆ ಸಮುದಾಯದ ಮುಖಂಡರು ಶೇ.15ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದರು. ಚುನಾವಣೆ ತಂತ್ರಕ್ಕಾಗಿ ಸರ್ಕಾರ 2ಡಿ ಹೆಸರಲ್ಲಿ ಶೇ.7ರಷ್ಟು ಮೀಸಲಾತಿ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ನಂತರ ಪ್ರತಿಭಟನೆ ಅಂತ್ಯಗೊಂಡಿದೆ ಎಂದು ಘೋಷಿಸಲಾಯಿತು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಜನರು ಪ್ರಮುಖವಾಗಿ ಇಡೀ ಉತ್ತರ ಕರ್ನಾಟಕದ ಭಾಗದವರು ಕಳೆದ ಎರಡು ವರ್ಷಗಳಿಂದ ಊಟದ ಬುತ್ತಿ ತೆಗೆದುಕೊಂಡು ಮನೆ ಮಠ ಬಿಟ್ಟು ಮೀಸಲಾತಿಗಾಗಿ ಆಗ್ರಹಿಸಿ ನನ್ನೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ಯಾವ ಸ್ವಾಮೀಜಿಗೂ ಸಿಗದ ದೊಡ್ಡ ಮಟ್ಟದ ಬೆಂಬಲವನ್ನು ಜನ ನನಗೆ ನೀಡಿದ್ದಾರೆ. ಕಾರಣ ನಮ್ಮ ಸಮುದಾಯದ ಸ್ವಾಮೀಜಿ ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಅರಿತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭ ಬಾವುಕರಾದರು.

ಇಷ್ಟು ವರ್ಷಗಳ ನಿರಂತರ ಹೋರಾಟದ ಪರಿಣಾಮವಾಗಿ ಪಂಚಮಸಾಲಿ ಸಮುದಾಯಕ್ಕೆ ಸ್ವಲ್ಪಮಟ್ಟಿನ ಮೀಸಲಾತಿ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಮೊದಲ ಹೆಜ್ಜೆಯ ಸಾಧನೆಯಾಗಿ ಶೇ.7ರಷ್ಟು ಮೀಸಲಾತಿ ಸಿಕ್ಕಿದೆ. ಸರ್ಕಾರ ಶೇ.7ರಷ್ಟು ಮೀಸಲಾತಿ ಘೋಷಿಸಿದೆ. ಮುಂದಿನ ದಿನಗಳಲ್ಲಿ ಯಾವ ಸರ್ಕಾರ ಬರಲಿದೆ ಎಂಬುದನ್ನು ನೋಡಿಕೊಂಡು ಎಲ್ಲರೂ ಚರ್ಚೆ ನಡೆಸಿ ಮತ್ತೆ ಹೋರಾಟ ನಡೆಸೋಣ, ಪ್ರಸ್ತುತ ಈ ಹೋರಾಟ ಇಲ್ಲಿಗೆ ನಿಲ್ಲಿಸೋಣ ಎಂದು ಕರೆ ನೀಡಿದರು.

ಚುನಾವಣೆ ನಂತರ ಮೀಸಲಾತಿ ಹೆಚ್ಚಳಕ್ಕಾಗಿ ಹಾಗೂ ಎಲ್ಲಾ ಲಿಂಗಾಯತರ ಒಬಿಸಿ ಮೀಸಲಾತಿಗಾಗಿ   ಹೋರಾಟ ಮುಂದುವರೆಸಲಾಗುವುದು ಎಂದು ಸ್ವಾಮೀಜಿ ಹೇಳಿದರು.