ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತಲ್ಲೂರು ಗ್ರಾಮದಲ್ಲಿ ಹಾವು ಕಚ್ಚಿ ಬಾಲಕಿ ಸಾವಿಗೀಡಾಗಿದ್ದಾಳೆ.
ಮೃತ ಯುವತಿ ಅಕ್ಷತಾ ( 17) ಎಂದು ತಿಳಿದುಬಂದಿದೆ.
ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಮಲಗಿದ್ದ ಯುವತಿ ದಿಡೀರನೇ ಎದ್ದು ಕೂತು ನನಗೆ ಹಾವು ಕಚ್ಚಿದೆ ಎಂದು ಯುವತಿ ಕಿರುಚಿದ್ದಾಳೆ. ಆದರೆ, ಕರೆಂಟ್ ಹಾಕಿ ನೋಡಿದಾಗ ಹಾವು ಕಾಣದ ಹಿನ್ನೆಲೆಯಲ್ಲಿ ಮನೆಯವರು ಆಸ್ಪತ್ರೆಗೆ ಕರೆದೊಯ್ಯದೇ ಬೈದು ಮಲಗಿಕೊಂಡಿದ್ದರು.
ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವಿಷ ದೇಹದ ತುಂಬಾ ಹರಡಿಕೊಂಡು ಚಿಕಿತ್ಸೆ ಫಲಿಸದೇ ಅಕ್ಷತಾ ಸಾವನ್ನಪ್ಪಿದಾಳೆ.
ಮೊದಲು ಆನವಟ್ಟಿ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಆದರೆ, ಅಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಶಿಕಾರಿಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಯುವತಿಗೆ ಹಾವು ಕಚ್ಚಿದೆ ಎಂಬ ವಿಷಯ ತಿಳಿದ ನಂತರ ಆಕೆಯನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಅಷ್ಟರಲ್ಲಾಗಲೇ ಹಾವಿನ ವಿಷ ದೇಹಪೂರ್ತಿ ಹರಡಿಕೊಂಡಿತ್ತು. ವೈದ್ಯರು ನಿರಂತರವಾಗಿ ಚಿಕಿತ್ಸೆಯನ್ನು ನೀಡಿದರೂ ಸಹ ಆಕೆ ಬದುಕುಳಿಯಲಿಲ್ಲ.