ಬೆಂಗಳೂರು : ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ ಬೆಂಗಳೂರಿನ ಪಾರ್ಕ್‌ಗಳು ಬಂದ್ ಆಗಲಿವೆ. ಡಿ.31 ರ ಬುಧವಾರ ಸಂಜೆ ಆರು ಗಂಟೆಗೆ ಪಾರ್ಕ್ ಮತ್ತು ಕೆರೆಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕೇಂದ್ರ ನಗರ ಪಾಲಿಕೆ ಸುತ್ತೋಲೆ ಹೊರಡಿಸಿದೆ.
ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಒಟ್ಟಾಗಿ ಸೇರುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ಹಾಗೂ ಸಾರ್ವಜನಿಕ ಶಾಂತಿ ಭಂಗವಾಗದಂತಿರಲು ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಕೇಂದ್ರ ನಗರ ಪಾಲಿಕೆಗೆ ಸೇರಿದ ಎಲ್ಲಾ ಉದ್ಯಾನಗಳು ಮತ್ತು ಕೆರೆಗಳಿಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಾಮಾನ್ಯವಾಗಿ ಪಾರ್ಕ್‌ಗಳು ರಾತ್ರಿ 9 ಗಂಟೆವರೆಗೂ ಓಪನ್ ಇರುತ್ತವೆ. ಆದರೆ, ನ್ಯೂ ಇಯರ್ ಹಿಂದಿನ ದಿನದ ರಾತ್ರಿ ಪಾರ್ಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅಹಿತಕರ ಘಟನೆಗಳಿಗೆ ಕಾರಣ ಆಗುತ್ತೆ ಅಂತಾ ಕೇಂದ್ರ ನಗರ ಪಾಲಿಕೆ ಈ ನಿರ್ಧಾರ ಮಾಡಿದೆ. ಸಂಜೆ ಆರು ಗಂಟೆಯಿಂದ ಬೆಳಗ್ಗೆ ಐದು ಗಂಟೆವರೆಗೂ ಪಾರ್ಕ್‌ಗಳು ಕ್ಲೋಸ್ ಇರಲಿವೆ ಎಂಬ ಮಾಹಿತಿ ಲಭ್ಯವಾಗಿದೆ.















