ವಿಜಯಪುರ: ನಗರದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಣ ಆಭರಣ ಕಳ್ಳತನ ಪ್ರಕರಣದಲ್ಲಿ ನಗರದ ಪೊಲೀಸರು ಕಲಬುರಗಿ ಮೂಲದ ಮೂವರು ಅಂತರ ಜಿಲ್ಲಾ ಕಳ್ಳಿಯರನ್ನು ಬಂಧಿಸಿದ್ದು, 8.70 ಲಕ್ಷ ರೂ. ಮೌಲ್ಯದ 146 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳ್ಳತನ ಆರೋಪದಲ್ಲಿ ಬಂಧಿತರನ್ನು ಕಲಬುರಗಿ ನಗರದ ಬಾಪು ನಗರ ನಿವಾಸಿಗಳಾದ 56 ವರ್ಷದ ಗಂಗೂಬಾಯಿ ನಾರಾಯಣ ಕಾಳೆ, 44 ವರ್ಷದ ನರಸಮ್ಮ ಅಮಿತ ಕುಮಾರ ಪಾಟೀಲ ಹಾಗೂ 35 ವರ್ಷದ ಕರಿಷ್ಮಾ ಸಹದೇವ ಉಪಾದ್ಯೆ ಎಂದು ಗುರುತಿಸಲಾಗಿದೆ.
ಬಂಧಿತರು ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಸೆಟ್ ಲೈಟ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು.
ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಎಸ್ಪಿ ಋಷಿಕೇಶ ಭಗವಾನ್ ಅವರು ಗಾಂಧಿಚೌಕ್ ಸಿಪಿಐ ಮಹಾಂತೇಶ ದ್ಯಾಮಣ್ಣವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.
ಪೊಲೀಸರ ತನಿಖಾ ತಂಡ ಅಂತರ ಜಿಲ್ಲಾ ಮೂವರು ಕಳ್ಳಿಯರನ್ನು ಬಂಧಿಸಿ, 8.70 ಲಕ್ಷ ರೂ. ಮೌಲ್ಯದ 146 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರು ಬಂಧಿತರು ನಡೆಸಿದ ನಾಲ್ಕು ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿರುವ ತನಿಖಾ ತಂಡಕ್ಕೆ ಎಸ್ಪಿ ಋಷಿಕೇಶ ಭಗವಾನ್ ಬಹುಮಾನ ಘೋಷಿಸಿದ್ದಾರೆ.