ಮನೆ ರಾಷ್ಟ್ರೀಯ ಪತ್ರಾ ಚಾಳ್ ಹಗರಣ: ಸಂಜಯ್ ರಾವುತ್‌ಗೆ ಸೆ. 5ರ ವರೆಗೆ ನ್ಯಾಯಾಂಗ ಬಂಧನ

ಪತ್ರಾ ಚಾಳ್ ಹಗರಣ: ಸಂಜಯ್ ರಾವುತ್‌ಗೆ ಸೆ. 5ರ ವರೆಗೆ ನ್ಯಾಯಾಂಗ ಬಂಧನ

0

ಮುಂಬೈ(Mumbai): ಶಿವಸೇನಾ ಸಂಸದ ಸಂಜಯ ರಾವುತ್ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 5ರವರೆಗೆ ವಿಸ್ತರಿಸಿ ಸೋಮವಾರ ಆದೇಶ ನೀಡಿದೆ.

ಪತ್ರಾ ಚಾಳ್‌ ಭೂಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಆಗಸ್ಟ್ 1ರಂದು ವಶಕ್ಕೆ ಪಡೆದು ಬಳಿಕ ಬಂಧಿಸಿದ್ದರು. ಪ್ರಸ್ತುತ, ಶಿವಸೇನೆ ಸಂಸದರನ್ನು ಆರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿದೆ.

ಪತ್ರಾ ಚಾಲ್ ಪುನರಾಭಿವೃದ್ಧಿ ಹಗರಣದಲ್ಲಿ, ರಿಯಲ್ ಎಸ್ಟೇಟ್ ಕಂಪನಿ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಿಂದ ಪ್ರವೀಣ್ ರಾವುತ್ ಪಡೆದ 112 ಕೋಟಿ ರೂಪಾಯಿಯಲ್ಲಿ ಸಂಜಯ್ ರಾವುತ್ ಮತ್ತು ಅವರ ಕುಟುಂಬ 1.06 ಕೋಟಿಯ ನೇರ ಫಲಾನುಭವಿಗಳು ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.

ಬಂಧನಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ ನೀಡಿದ್ದ ಎರಡು ಸಮನ್ಸ್ ತಪ್ಪಿಸಿದ್ದ ಕಾರಣ, ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಆಗಸ್ಟ್ 1 ರಂದು ಅವರನ್ನು ಬಂಧಿಸಿತ್ತು. ಜೈಲಿನಲ್ಲಿ ಸಂಜಯ್ ರಾವುತ್‌ಗೆ ಮನೆಯ ಊಟಕ್ಕೆ ಅವಕಾಶ ನೀಡಲಾಗಿದೆ. ಸಂಜಯ್ ರಾವುತ್ ಬಂಧನದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ವರ್ಷಾ ರಾವುತ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.