ಬೆಂಗಳೂರು(Bengaluru): ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದುವೇ ಸಾಕ್ಷಿ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ಥರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಸರಣಿ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ಥರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿರುವಾಗಲೇ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನ ಕೊಲೆ ನಡೆದಿರುವ ಹತ್ಯೆಯನ್ನು ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ ಎಂದು ಹೇಳಿದ್ದಾರೆ.
ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನ ಕೊಲೆ ನಡೆದಿದೆ. ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಹಾಕದೆ ಅವರು ದುಷ್ಕೃತ್ಯವನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರೇ ಇದಕ್ಕೆ ಹೊಣೆಗಾರರು ಎಂದು ಆರೋಪಿಸಿದರು.
ಅಸಮರ್ಥ ಗೃಹ ಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸುತ್ತಿದ್ದಾರೆ. ಸಿಎಂ ತಕ್ಷಣ ಗೃಹಸಚಿವ ಆರಗ ಜ್ಞಾನೇಂದ್ರರನ್ನು ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನರು ಮನೆಯಿಂದ ಹೊರಗೆ ಬರುವುದು ಕಷ್ಟವಾಗಬಹುದು ಎಂದು ಹೇಳಿದ್ದಾರೆ.