ಕ್ಷುಲ್ಲಕ ವ್ಯಾಜ್ಯಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿದ್ದು, ಅನಗತ್ಯವಾಗಿ ಅರ್ಜಿ, ಮೇಲ್ಮನವಿ ಹಾಗೂ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸರ್ಕಾರವೇ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಕಿಡಿ ಕಾರಿದೆ.
ಜತೆಗೆ, ಇನ್ನು ಮುಂದೆ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೂಡಿದ ಅನಗತ್ಯ ದಾವೆಯನ್ನು ನ್ಯಾಯಾಲಯ ವಜಾಗೊಳಿಸಿದರೆ, ಅಂತಹ ಅರ್ಜಿ ಸಲ್ಲಿಕೆಗೆ ಕಾರಣವಾದ ಅಧಿಕಾರಿಯಿಂದಲೇ ವ್ಯಾಜ್ಯದ ವೆಚ್ಚ ವಸೂಲಿ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ. ರಹಮತ್ ಉಲ್ಲಾ ಎಂಬುವರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೈಬಿಟ್ಟಿದ್ದ ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಪಿ ಎನ್ ದೇಸಾಯಿ ಅವರಿದ್ದ ವಿಭಾಗೀಯ ಪೀಠ ವಜಾ ಮಾಡಿದೆ.
ಹಾಲಿ ಪ್ರಕರಣದಲ್ಲಿ ಸರ್ಕಾರಕ್ಕೆ ದಂಡ ವಿಧಿಸುವ ನಿರ್ಧಾರದಿಂದ ನ್ಯಾಯಾಲಯ ಹಿಂದೆ ಸರಿದಿದೆ. ಆದರೆ, ಇದನ್ನು ಅಂತಿಮ ಎಚ್ಚರಿಕೆ ಎಂದು ಸರ್ಕಾರ ಪರಿಗಣಿಸಬೇಕು. ಭವಿಷ್ಯದಲ್ಲಿ ಇಂತಹ ಕ್ಷುಲ್ಲಕ ವ್ಯಾಜ್ಯಗಳು ಸಲ್ಲಿಕೆಯಾದರೆ, ಕೇವಲ ದಂಡ ವಿಧಿಸುವುದಷ್ಟೇ ಅಲ್ಲ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಆದೇಶ ಹೊರಡಿಸುವುದರಿಂದ ನ್ಯಾಯಾಲಯವನ್ನು ಯಾರೂ ತಡೆಯಲಾಗದು ಎಂದೂ ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಅನಗತ್ಯ ಹಾಗೂ ಕ್ಷುಲ್ಲಕ ದಾವೆಗಳನ್ನು ಹೂಡುವ ಮೂಲಕ ಸರ್ಕಾರವೇ ವ್ಯಾಜ್ಯಗಳ ಸ್ಪೋಟಕ್ಕೆ ಕಾರಣವಾಗುತ್ತಿದೆ. ಆದ್ದರಿಂದ, ಈ ನ್ಯಾಯಾಲಯದ ಅತಿದೊಡ್ಡ ವ್ಯಾಜ್ಯದಾರನಾದ ಸರ್ಕಾರಕ್ಕೆ ಕಠಿಣ ಸಂದೇಶ ರವಾನಿಸಬೇಕಿದೆ ಎಂದಿರುವ ಹೈಕೋರ್ಟ್, ಕ್ಷುಲ್ಲಕ ವ್ಯಾಜ್ಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕೆಲ ನಿರ್ದೇಶನಗಳನ್ನೂ ನೀಡಿದೆ.
ನಿರ್ದೇಶನಗಳೇನು?
• ನ್ಯಾಯಾಲಯಕ್ಕೆ ಯಾವುದೇ ಅರ್ಜಿ, ಮೇಲ್ಮನವಿ ಅಥವಾ ಮರು ಪರಿಶೀಲನೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲವೆಂದು ಕಾನೂನು ಇಲಾಖೆ ಅನಿಸಿಕೆ ವ್ಯಕ್ತಪಡಿಸಿದರೆ, ಅ ಅಭಿಪ್ರಾಯಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಲು ಸಂಬಂಧಪಟ್ಟ ಇಲಾಖೆ ಮುಂದಾದಲ್ಲಿ, ಯಾವ ಕಾರಣಕ್ಕೆ ಕಾನೂನು ಇಲಾಖೆಯ ಸಲಹೆ ತಿರಸ್ಕರಿಸಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ಕಾರಣವನ್ನು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಲಿಖಿತ ರೂಪದಲ್ಲಿ ದಾಖಲಿಸಬೇಕು.
• ಕಾನೂನು ಇಲಾಖೆ ಅನಿಸಿಕೆಗೆ ವಿರುದ್ಧವಾಗಿ ಅರ್ಜಿ ಸಲ್ಲಿಸಿ, ಅಂತಹ ಅರ್ಜಿಗಳನ್ನು ನ್ಯಾಯಾಲಯ ಮಾನ್ಯ ಮಾಡದಿದ್ದರೆ ಸರ್ಕಾರ ಕಡ್ಡಾಯವಾಗಿ ಆ ವ್ಯಾಜ್ಯಕ್ಕೆ ತಗುಲುವ ವೆಚ್ಚವನ್ನು ಲೆಕ್ಕ ಹಾಕಿ ಸಂಬಂಧಪಟ್ಟ ಅಧಿಕಾರಿಯಿಂದ ವಸೂಲಿ ಮಾಡಬೇಕು.
• ಇಂತಹ ಅರ್ಜಿಗಳನ್ನು ದಾಖಲಿಸುವುದನ್ನು ತಪ್ಪಿಸಲು ‘ಕರ್ನಾಟಕ ರಾಜ್ಯ ವ್ಯಾಜ್ಯ ಪರಿಹಾರ ನೀತಿ-2021’ ಅನ್ನು ಕಾನೂನು ಇಲಾಖೆ ರೂಪಿಸಿದೆ. ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನೀತಿಯ ಪ್ರತಿಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಎಲ್ಲಾ ಮಂಡಳಿಗಳು, ವ್ಯವಸ್ಥಾಪನಾ ಸಮಿತಿಗಳು, ನಿಗಮ-ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಅಭಿಯೋಜನಾ ಇಲಾಖೆ ನಿರ್ದೇಶಕರು, ಸರ್ಕಾರಿ ಅಭಿಯೋಜಕರು ಮತ್ತಿತತರಿಗೆ ಮೂರು ವಾರದಲ್ಲಿ ರವಾನಿಸಬೇಕು.
• ಈ ನೀತಿಯ ಬಗ್ಗೆ ಜಾಗೃತಿ ಮೂಡಿಸಲು ಕಾನೂನು ಇಲಾಖೆಯ ಕಾರ್ಯದರ್ಶಿಗಳು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಕಾರ್ಯಗಾರ ಆಯೋಜಿಸಬೇಕು.
ಪ್ರಕರಣದ ಹಿನ್ನೆಲೆ: ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಹಮತ್ ಉಲ್ಲಾ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 1978 ಹಾಗೂ 2014ರ ನಡುವೆ ರಹಮತ್ ಉಲ್ಲಾ ತಮ್ಮ ಆದಾಯಕ್ಕೂ ಮೀರಿ 23.8 ಲಕ್ಷ ಆಸ್ತಿ ಹೊಂದಿದ್ದರು ಎಂದು ವರದಿ ನೀಡಿದ್ದರು. ಇದರಿಂದ, ಅವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಿತ್ತು. ಅದನ್ನು ಕೆಎಟಿ ರದ್ದುಗೊಳಿಸಿ ಆದೇಶಿಸಿತ್ತು. ಆ ತೀರ್ಪನ್ನು ಪ್ರಶ್ನಿಸದಂತೆ ಕಾನೂನು ಇಲಾಖೆ ಸಲಹೆ ನೀಡಿದ್ದರೂ, ಗೃಹ ಇಲಾಖೆ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿತ್ತು.