ಕನ್ನಡದಲ್ಲಿ ಆಂಥಾಲಜಿ ಪ್ರಕಾರದ ಸಿನಿಮಾಗಳ ಸಂಖ್ಯೆ ತೀರಾ ಕಡಿಮೆ. ಕೆಲ ವರ್ಷಗಳ ಹಿಂದೆ ರಿಷಬ್ ಶೆಟ್ಟಿ ಇಂಥದ್ದೊಂದು ಪ್ರಯತ್ನ ಮಾಡಿದ್ದರು. ಇದೀಗ ಗುರು ದೇಶಪಾಂಡೆ ‘ಪೆಂಟಗನ್’ ಹೆಸರಿನ ಆಂಥಾಲಜಿ ಸಿನಿಮಾ ಮಾಡಿದ್ದಾರೆ. ಐದು ಸಣ್ಣ ಸಣ್ಣ ಕಥೆಗಳನ್ನು ಒಂದೇ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಐದು ಕಥೆಗಳನ್ನು ಗುರು ದೇಶಪಾಂಡೆ ಸೇರಿದಂತೆ ಐವರು ನಿರ್ದೇಶಕರು ಡೈರೆಕ್ಟ್ ಮಾಡಿರುವುದು ವಿಶೇಷ.
ಕೆಫೆಯಲ್ಲಿ ನಡೆಯುವ ಮೊದಲ ಕಥೆ
ಆರಂಭದಲ್ಲಿ ಬರುವ ಕಥೆಯು ಬಹುತೇಕ ಒಂದು ಕೆಫೆಯಲ್ಲಿ ನಡೆಯುತ್ತದೆ. ಇದರಲ್ಲಿ ಪ್ರಮೋದ್ ಶೆಟ್ಟಿ ಸುಪಾರಿ ಕಿಲ್ಲರ್ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕಾಮಿಡಿ ಕ್ರೈಮ್ ಥ್ರಿಲ್ಲರ್ ರೀತಿಯಲ್ಲಿ ಮೂಡಿಬಂದಿದೆ. ಚಂದ್ರಮೋಹನ್ ಇದರ ನಿರ್ದೇಶನ ಮಾಡಿದ್ದಾರೆ.
ಮೈಸೂರು ಪಾಕ್ ಸುತ್ತ 2ನೇ ಕಥೆ
‘ಶಿವಾಜಿ ಸುರತ್ಕಲ್’ ಸಿನಿಮಾ ಖ್ಯಾತಿಯ ಆಕಾಶ್ ಶ್ರೀವತ್ಸ ಮೈಸೂರು ಪಾಕ್ ಕಥೆಯನ್ನು ಡೈರೆಕ್ಟ್ ಮಾಡಿದ್ದಾರೆ. ಮನೆಯಲ್ಲಿರುವ ವಯೋವೃದ್ಧ ವ್ಯಕ್ತಿಯ ಕಥೆಯನ್ನು ಇಲ್ಲಿ ಹೇಳಲಾಗಿದೆ. ಜೊತೆಗೆ ಮೈಸೂರು ಪಾಕ್ ಅನ್ನು ಹಿನ್ನೆಲೆಯಾಗಿಟ್ಟುಕೊಂಡು ಕುಟುಂಬಗಳಲ್ಲಿನ ಹಿರಿಯರ ಕಷ್ಟಗಳ ಬಗ್ಗೆ ತಿಳಿಸಲಾಗಿದೆ.
3ನೇ ಕಥೆಯಲ್ಲಿ ರೊಮ್ಯಾಂಟಿಕ್ ಕ್ರೈಮ್
ಇಂದಿನ ಅಧುನಿಕ ಯುಗದಲ್ಲಿ ಅನೈತಿಕ ಸಂಬಂಧಗಳು, ಸೈಬರ್ ಕ್ರೈಮ್ಗಳು ಹೆಚ್ಚಾಗುತ್ತಿವೆ. ಇದರಿಂದ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ಈ ಕಥೆಯಲ್ಲಿ ನಿರ್ದೇಶಕ ರಾಘು ಶಿವಮೊಗ್ಗ ಹೇಳಿದ್ದಾರೆ.
ಜಾತಿ ಸಮಸ್ಯೆ ಬಗ್ಗೆ ನಾಲ್ಕನೇ ಕಥೆ
ರವಿಶಂಕರ್, ಪ್ರೀತಿಕಾ ಮುಖ್ಯಭೂಮಿಕೆಯಲ್ಲಿರುವ ನಾಲ್ಕನೇ ಕಥೆಯಲ್ಲಿ ಜಾತಿ ಬಗ್ಗೆ ಪರಿಣಾಮಕಾರಿಯಾದ ವಿಚಾರವೊಂದನ್ನು ಹೇಳಲಾಗಿದೆ. ಈ ಕಥೆಗೆ ಹೊಸ ಪ್ರತಿಭೆ ಕಿರಣ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಕನ್ನಡಪರ ಹೋರಾಟಗಾರರ ಕುರಿತ ಐದನೇ ಕಥೆ
ಗುರು ದೇಶಪಾಂಡೆ ಈ ಆಂಥಾಲಜಿ ಸಿನಿಮಾದ 5ನೇ ಕಥೆಗೆ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಕನ್ನಡಪರ ಹೋರಾಟಗಾರರ ಬಗ್ಗೆ ಹೇಳಲಾಗಿದೆ. ಒಂದಷ್ಟು ರಿಯಲ್ ವ್ಯಕ್ತಿತ್ವಗಳನ್ನು ಕೂಡ ಈ ಕಥೆ ನೆನಪು ಮಾಡುತ್ತದೆ.
ಒಟ್ಟಾರೆ ‘ಪೆಂಟಗನ್’ ಹೇಗಿದೆ?
ಇಲ್ಲಿ ಐದು ಕಥೆಗಳಿದ್ದರೂ, ಒಂದಕ್ಕೊಂದು ಸಂಬಂಧವಿಲ್ಲ. ಎಲ್ಲ ಕಥೆಗಳಲ್ಲೂ ಕಾಮನ್ ಆಗಿ ಕಾಣಿಸುವುದು ಸಾವು ಮಾತ್ರ. ಅಂದರೆ, ಎಲ್ಲ ಕಥೆಗಳು ಸಾವಿನ ಮೂಲಕವೇ ಅಂತ್ಯವಾಗುತ್ತವೆ. ಆದರೆ ಅಲ್ಲಿ ಸಾಯುವುದು ಯಾರು ಮತ್ತು ಯಾಕಾಗಿ ಎಂಬುದೇ ಕುತೂಹಲಕಾರಿ. ಆರಂಭದ ಎರಡು ಕಥೆಗಳಲ್ಲಿ ಅಷ್ಟೇನೂ ಗಟ್ಟಿತನ ಕಾಣಿಸುವುದಿಲ್ಲ. ಆ ಕಥೆಗಳನ್ನು ಇನ್ನಷ್ಟು ಚೆಂದಗಾಣಿಸುವ ಸಾಧ್ಯತೆಗಳಿದ್ದವು. ಆದರೆ ಆಯಾ ಕಥೆಗಳ ನಿರ್ದೇಶಕರು ಅದನ್ನು ಕೈಚೆಲ್ಲಿದ್ದಾರೆ. ಆದರೆ ರಾಘು ಶಿವಮೊಗ್ಗ ನಿರ್ದೇಶನ ಕಥೆ ಒಂದಷ್ಟು ಚಿಂತನೆಗೆ ಹಚ್ಚುತ್ತದೆ. ಈಗಿನ ಯುವ ಜನತೆಗೆ ಒಂದು ರೀತಿಯ ಎಚ್ಚರಿಕೆ ಗಂಟೆಯ ರೀತಿಯಲ್ಲಿ ಈ ಕಥೆ ಮೂಡಿಬಂದಿದೆ ಮತ್ತು ಇದು ತುಂಬ ‘ಬೋಲ್ಡ್’ ದೃಶ್ಯಗಳನ್ನು ಒಳಗೊಂಡಿದೆ! ಕಲಾವಿದರ ನಟನೆ ಕೂಡ ಉತ್ತಮವಾಗಿದೆ.
ಹೊಸ ಪ್ರತಿಭೆ ಕಿರಣ್ ಅವರ ಜಾತಿ ಸಮಸ್ಯೆಯ ಕುರಿತ ಕಥೆ ಕೂಡ ಗಮನಸೆಳೆಯುತ್ತದೆ. ಗುರು ದೇಶಪಾಂಡೆಯ ಕನ್ನಡಪರ ಹೋರಾಟಗಾರರ ಕಥೆಯಲ್ಲಿ ಒಂದಷ್ಟು ನೈಜ ವಿಚಾರಗಳನ್ನು ಚರ್ಚೆಗೆ ತಂದಿದ್ದಾರೆ ಅನ್ನೋದು ಗಮನಿಸಬೇಕಾದ ವಿಚಾರ.
ಕಲಾವಿದರ ನಟನೆ ಹೇಗಿದೆ?
ಈ ಐದು ಕಥೆಗಳಲ್ಲೂ ಪ್ರಮುಖ ಪಾತ್ರಗಳನ್ನು ಅನುಭವಿ ಕಲಾವಿದರೇ ನಿಭಾಯಸಿರುವುದು ವಿಶೇಷ. ಪ್ರಮೋದ್ ಶೆಟ್ಟಿ, ಬಿರಾದರ್, ಪ್ರಕಾಶ್ ಬೆಳವಾಡಿ, ರವಿಶಂಕರ್, ಕಿಶೋರ್ ಮತ್ತು ಪೃಥ್ವಿ ಅಂಬಾರ್ ಅವರು ಸಿಕ್ಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜೊತೆಗೆ ಸಾಕಷ್ಟು ಹೊಸ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ, ಎಲ್ಲರದ್ದೂ ಸಹಜ ನಟನೆ.
ತಾಂತ್ರಿಕವಾಗಿ ಈ ಸಿನಿಮಾ ಹೇಗಿದೆ?
ಕಥೆಗಳು ಚಿಕ್ಕ ಚಿಕ್ಕದಾಗಿದ್ದರೂ, ತಾಂತ್ರಿಕವಾಗಿ ಉತ್ತಮವಾಗಿಯೇ ಈ ಸಿನಿಮಾ ಮೂಡಿಬಂದಿದೆ. ಛಾಯಾಗ್ರಾಹಕರ ಕೆಲಸ ಅಚ್ಚುಕಟ್ಟಾಗಿದೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಕ್ಕೆ ಹೊಸ ಮೆರುಗನ್ನು ತಂದಿದೆ. ಆದರೆ ಸಿನಿಮಾದ ಅವಧಿ (2.54 ಗಂಟೆ) ದೀರ್ಘವಾಗಿದೆ. ಇದು ಕೊಂಚ ಜಾಸ್ತಿ ಆಯಿತು ಎನಿಸುತ್ತದೆ, ಅದರ ಬಗ್ಗೆಯೂ ಕೊಂಚ ಗಮನ ನೀಡಬಹುದಿತ್ತು.