ಅಸ್ತಮಾ ತೊಂದರೆಯಿರುವವರು ಆಹಾರ ಪದ್ಧತಿಯಲ್ಲಿ ಬೆಲ್ಲವನ್ನು ರೂಢಿಸಿಕೊಳ್ಳಬೇಕು. ವೈದ್ಯರು ಕೊಟ್ಟಿರುವ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಬೇಕು. ಜೊತೆಗೆ ಆಹಾರ ಪದ್ಧತಿಯಲ್ಲಿ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಅಸ್ತಮ ಸಮಸ್ಯೆಯಿಂದ ತಕ್ಕಮಟ್ಟಿಗೆ ಪರಿಹಾರ ಕಾಣಬಹುದು.
ನಿಮ್ಮ ದೇಹದಲ್ಲಿ ಅನಿಮಿಯ ಸಮಸ್ಯೆಯನ್ನು ಅಂದರೆ ಕಬ್ಬಿಣದ ಅಂಶದ ಕೊರತೆಯನ್ನು ಹೋಗಲಾಡಿಸುವ ಜೊತೆಗೆ ರಕ್ತ ಸಂಚಾರವನ್ನು ಹೆಚ್ಚು ಮಾಡುವಲ್ಲಿ ಬೆಲ್ಲ ಪ್ರಮುಖ ಪಾತ್ರವಹಿಸುತ್ತದೆ. ಕೆಂಪುರಕ್ತಕಣಗಳನ್ನು ಉತ್ತೇಜಿಸಿ ಉಸಿರಾಟ ತೊಂದರೆಯನ್ನು ಸರಿಪಡಿಸುತ್ತದೆ. ಆದರೆ ನಿರಂತರ ವಾಗಿ ಮತ್ತು ನಿಯಮಿತವಾಗಿ ಬೆಲ್ಲ ಸೇವನೆ ಮಾಡಬೇಕು.
ಹೆಚ್ಚು ಪೌಷ್ಟಿಕ ಸತ್ವಗಳು ಸಿಗುತ್ತವೆ:
ಬೆಲ್ಲದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಪೊಟ್ಯಾಶಿಯಂ, ಸೋಡಿಯಂ, ಕ್ಯಾಲ್ಸಿಯಂ, ಫಾಸ್ಫರಸ್ ಜೊತೆಗೆ ಜಿಂಕ್ ಲಭ್ಯವಿದೆ. ಇದು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಸುಧಾರಿಸುತ್ತದೆ. ಇದರ ಜೊತೆಗೆ ಮ್ಯಾಗ್ನಿಷಿಯಂ ಅಂಶ ಇರುವುದರಿಂದ ನರನಾಡಿಗಳು ಸಹ ವಿಶ್ರಾಂತಗೊಳ್ಳುತ್ತವೆ. ವಿಶೇಷವಾಗಿ ಶ್ವಾಸಕೋಶದ ಭಾಗದ ಮಾಂಸಖಂಡಗಳಿಗೆ ಸಾಕಷ್ಟು ಬಲ ಸಿಗುತ್ತದೆ. ವಿಪರೀತ ಹೆಚ್ಚಿನ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಇದು ತುಂಬಾ ಒಳ್ಳೆಯದು.
ಇದರಲ್ಲಿ ಅಲರ್ಜಿ ವಿರೋಧಿ ಲಕ್ಷಣಗಳಿವೆ:
ನಿಮ್ಮ ಶ್ವಾಸಕೋಶದ ಭಾಗದಲ್ಲಿ ಒಂದು ವೇಳೆ ಸೋಂಕು ಎದುರಾದರೆ ಅದರಿಂದ ಕೆಮ್ಮು ಜಾಸ್ತಿ ಯಾಗುತ್ತದೆ ಮತ್ತು ಉಸಿರಾಟದ ತೊಂದರೆ ಎದುರಾಗುತ್ತದೆ. ಇದು ಆನಂತರದಲ್ಲಿ ಕೆಮ್ಮು ಮತ್ತು ದಮ್ಮು ಸಮಸ್ಯೆಗೆ ತಿರುಗುತ್ತದೆ. ಆದರೆ ಬೆಲ್ಲವನ್ನು ಸೇವನೆ ಮಾಡುತ್ತಾ ಹೋದರೆ ಈ ರೀತಿಯ ಶ್ವಾಸಕೋಶದ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವುದಿಲ್ಲ.
ಬೆಲ್ಲದ ಸೇವನೆ ಹೇಗೆ:
ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಬೆಲ್ಲವನ್ನು ಸುಲಭವಾಗಿ ಬಳಸಬಹುದು. ಬೆಲ್ಲವನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ನೀವು ಊಟ ಮಾಡುವಾಗ ಜೊತೆಗೆ ಸ್ವಲ್ಪ ಸ್ವಲ್ಪ ತಿನ್ನಬಹುದು. ಇದರಿಂದ ಸಕ್ಕರೆ ಪದಾರ್ಥಗಳನ್ನು ತಿನ್ನಬೇಕು ಎನ್ನುವ ನಿಮ್ಮ ಬಯಕೆ ದೂರವಾಗುತ್ತದೆ. ಮಧುಮೇಹ ನಿರ್ವಹಣೆ ಆಗುವುದರ ಜೊತೆಗೆ ನಿಮ್ಮ ಉಸಿರಾಟ ಸಮಸ್ಯೆ ಕೂಡ ಬಗೆಹರಿಯುತ್ತದೆ. ನಿಮ್ಮ ಆಹಾರ ಮತ್ತು ಪಲ್ಯಗಳಲ್ಲಿ ಸಹ ತಯಾರು ಮಾಡುವಾಗ ಬೆಲ್ಲವನ್ನು ಬಳಸಬಹುದು. ಇದರಿಂದ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.