ಮನೆ ರಾಜ್ಯ ರಾಜಸ್ವ ಸಂಗ್ರಹಣೆಯಲ್ಲಿ ಶೇ. 91ರಷ್ಟು ಗುರಿ ಸಾಧನೆ: ರಾಜ್ಯಪಾಲ ಥಾವರಚಂದ್ ಗೆಹಲೋತ್

ರಾಜಸ್ವ ಸಂಗ್ರಹಣೆಯಲ್ಲಿ ಶೇ. 91ರಷ್ಟು ಗುರಿ ಸಾಧನೆ: ರಾಜ್ಯಪಾಲ ಥಾವರಚಂದ್ ಗೆಹಲೋತ್

0

ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜನವರಿ ಅಂತ್ಯದವರೆಗೆ ರಾಜಸ್ವ ಸಂಗ್ರಹಣೆಯಲ್ಲಿ ಶೇಕಡ 91ರಷ್ಟು ಗುರಿ ಸಾಧನೆ ಮಾಡಿದೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು.

ವಿಧಾನಮಂಡಲ ಅಧಿವೇಶನ ಶುಕ್ರವಾರದಿಂದ ಆರಂಭವಾಗಿದ್ದು, ವಿಧಾನಮಂಡಲದಲ್ಲಿ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದರು.

ಸ್ವಂತ ತೆರಿಗೆ ರಾಜಸ್ವ ಸಂಗ್ರಹಣೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 21ರಷ್ಟು ಹೆಚ್ಚಳವಾಗಿದೆ. ಬಜೆಟ್ ಅಂದಾಜಿನ ಶೇಕಡ 75ರಷ್ಟು ಮೊತ್ತವನ್ನು ಈವರೆಗೆ ವೆಚ್ಚ ಮಾಡಲಾಗಿದೆ ಎಂದರು.

ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗದವರು ಮತ್ತು ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದ್ದು, ಅಭಿವೃದ್ಧಿ ಪಥದಲ್ಲಿ ಮುಂಚೂಣಿಯ ರಾಜ್ಯವಾಗಿ ದಾಪುಗಾಲಿಡುತ್ತಿದೆ ಎಂದು ಹೇಳಿದರು.

2022ರ ಜನವರಿ ಅಂತ್ಯಕ್ಕೆ ರಾಜ್ಯ ಸರ್ಕಾರದ ಬಂಡವಾಳ ವೆಚ್ಚವು  26,915 ಕೋಟಿಯಷ್ಟಿತ್ತು. 2023ರ ಜನವರಿ ಅಂತ್ಯಕ್ಮೆ ಬಂಡವಾಳ ವೆಚ್ಚದ ಪ್ರಮಾಣವು 33,991 ಕೋಟಿಯಷ್ಟಿದ್ದು, ಬಂಡವಾಳ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಶ್ಲಾಘಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ‌ ಮೀಸಲಾತಿಯನ್ನು ಹೆಚ್ಚಿಸುವ ಐತಿಹಾಸಿಕ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ 15ರಿಂದ ಶೇ 17ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 29,000 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಸುಲಲಿತ ವ್ಯವಹಾರದ ವಿಷಯದಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರ ಸ್ಥಾನ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ ದೇಶದ ರಫ್ತು ವಹಿವಾಟಿಗೆ ರಾಜ್ಯವು 25.87 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಕೊಡುಗೆ ನೀಡಿದೆ. ಇದು ಈವರೆಗಿನ ಅತ್ಯಧಿಕ‌ ಮೊತ್ತವಾಗಿದೆ ಎಂದು ತಿಳಿಸಿದರು.

ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ 31 ತ್ವರಿತ ನ್ಯಾಯಾಲಯಗಳನ್ನು ಆರಂಭಿಸಲು ಮಂಜೂರಾತಿ ನೀಡಲಾಗಿದೆ. ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

2022-23ನೇ ಸಾಲಿನಲ್ಲಿ 58,588 ದಶಲಕ್ಷ ಯೂನಿಟ್ ಉತ್ಪಾದಿಸಲಾಗಿದೆ. ಹೆಚ್ಚುವರಿಯಾಗಿ ಲಭ್ಯವಿದ್ದ 4,326.45 ದಶಲಕ್ಷ ಗ ಯೂನಿಟ್ ವಿದ್ಯುತ್ ಮಾರಾಟ ಮಾಡಿದ್ದು, 2,500 ಕೋಟಿ ಗಳಿಸಲಾಗಿದೆ ಎಂದು ವಿವರ ನೀಡಿದರು.

ಬೆಳಕು ಯೋಜನೆಯಡಿ 2.35 ಲಕ್ಷ ವಿದ್ಯುತ್ ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ 124 ಕೋಟಿ ವ್ಯಯಿಸಲಾಗಿದೆ. ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ 7.73 ಲಕ್ಷ ಹೆಕ್ಟೇರ್ ಪ್ರದೇಶವನ್ನು ಕೈಬಿಡಲಾಗಿದೆ ಎಂದರು.

ರಾಜ್ಯದ ಎಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ 9556 ಹೆಚ್ಚುವರಿ ಶಾಲಾ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ 1923.5 ಕೋಟಿ ಅನುದಾನ ನೀಡಲಾಗಿದೆ. ಬೀದರ್, ಹಾವೇರಿ, ಚಾಮರಾಜನಗರ, ಕೊಡಗು, ಕೊಪ್ಪಳ, ಹಾಸನದಲ್ಲಿ 7 ವಿವಿ ಸ್ಥಾಪನೆ ಹಾಗೂ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 106314 ವಿದ್ಯಾರ್ಥಿನಿಯರಿಗೆ ಓಬವ್ವ ಆತ್ನ ರಕ್ಷಣಾ ಕಲೆ ಅಡಿಯಲ್ಲಿ ಆತ್ಮ ರಕ್ಷಣಾ ತರಬೇತಿ ನೀಡಲಾಗುತ್ತಿದೆ ಎಂದರು.

ಹಿಂದಿನ ಲೇಖನಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ವಿಮುಕ್ತಿಗೊಳಿಸಿ: ಸಿಎಂಗೆ ಅಶೋಕ್ ಪತ್ರ
ಮುಂದಿನ ಲೇಖನದಕ್ಷಿಣ ಭಾರತದ ಪ್ರವಾಸ ಪ್ಲಾನ್ ಮಾಡುವಾಗ ಈ ತಾಣಗಳು ಇರಲೇಬೇಕು