ಮೈಸೂರು: ರೈತ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ಬಿಜೆಪಿ ಸರ್ಕಾರ ಹಾಗೂ ಸಂಘ ಪರಿವಾರವು ನಿರಂತರವಾಗಿ ದಾಳಿ ಮಾಡುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ ನಡೆಸಿದರು.
ಗುರುವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಆಂದೋಲನಗಳಿಗೆ ಸಿಕ್ಕ ಜಯದಿಂದ ಹತಾಶರಾಗಿರುವ ಬಿಜೆಪಿಯು ರೈತ ಮುಖಂಡರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ನೈತಿಕ ಬಲ, ತಾತ್ವಿಕ ಸ್ಪಷ್ಟತೆಯು ಸಂಘಟನೆಗಿದ್ದು, ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಟಿಕಾಯತ್‌ರ ಮೇಲಿನ ಹಲ್ಲೆ ಪ್ರಕರಣ ಪೂರ್ವಯೋಜಿತ ಸಂಚಾಗಿದ್ದು, ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯವಹಿಸಿದರೆ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಸಮಿತಿ ರಚನೆ: ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧದ ಆರೋಪ ವಿಚಾರಣೆಗೆ ತ್ರಿಸದಸ್ಯ ಸಮಿತಿಯನ್ನು ಸಂಘವು ರಚಿಸಿದೆ. ಹಸಿರು ಟವೆಲ್ ಹಾಕಿಕೊಂಡು ರೈತ ಚಳವಳಿಯ ದಿಕ್ಕನ್ನೇ ತಪ್ಪಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಎಲ್ಲ ಸಂಘಟನೆಗಳೊಂದಿಗೂ ಚರ್ಚಿಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆ ನಂತರ ಸಂಘದ ಸಿದ್ಧಾಂತ ಹಾಗೂ ರಾಜಕೀಯ ನಿಲುವಿನಲ್ಲಿ ಸ್ಪಷ್ಟತೆಯಿರುವ ನೈತಿಕ ಬಲವುಳ್ಳ ಯುವಕ ಪಡೆಯನ್ನು ಕಟ್ಟಲು ಚರ್ಚೆ ನಡೆಯುತ್ತಿದೆ. ಚಳವಳಿ ದುರುಪಯೋಗ ಮಾಡಿಕೊಳ್ಳುವುದನ್ನು ತಡೆಯುವುದೇ ಇದರ ಉದ್ದೇಶ ಎಂದರು.
ಪಠ್ಯ ಪರಿಷ್ಕರಣ ಸಮಿತಿ ವಿಸರ್ಜಿಸಿ: ಶಾಲಾ ಮಕ್ಕಳ ಬಗ್ಗೆ ಕಾಳಜಿಯಿಲ್ಲದೆ ಗೊಂದಲದ ವಾತಾವರಣ ಸೃಷ್ಟಿಸಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣ ಸಮಿತಿಯನ್ನು ವಿಸರ್ಜಿಸಬೇಕು. ಸಿದ್ಧಾಂತ ಹೇರಿಕೆಯನ್ನು ಮಕ್ಕಳ ಮನಸ್ಸುಗಳ ಮೇಲೆ ಮಾಡುವುದು ಸಲ್ಲ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಪರಿಷ್ಕರಣೆ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರವು ಕ್ರಮ ಕೈಗೊಳ್ಳುತ್ತಿಲ್ಲ. ಉದ್ದೇಶಿತ ಯೋಜನೆಯನ್ನು ಕಾರ್ಯಗೊಳಿಸುವ ಹಠಕ್ಕೆ ಬಿದ್ದಿದೆ ಎಂದು ಕಿಡಿಕಾರಿದರು.