ಬೆಂಗಳೂರು (Bengaluru): ಮಲೇಷ್ಯಾ ಮೂಲದ ಪೆಟ್ರೋನಾಸ್ ಹೈಡ್ರೋಜನ್ ಮತ್ತು ಕಾಂಟಿನೆಂಟಲ್ ಇಂಡಿಯಾ ಸಂಸ್ಥೆಗಳು 32,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಪೆಟ್ರೋನಾಸ್ ಹೈಡ್ರೋಜನ್ ಸಿಇಓ ಅದ್ಲಾನ್ ಅಹ್ಮದ್ , ಕಾಂಟಿನೆಂಟಲ್ ಇಂಡಿಯಾದ ಸಿಇಓ ಪ್ರಶಾಂತ್ ದೊರೆಸ್ವಾಮಿ ತಮ್ಮ ಕಂಪನಿ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದರ್ಭದಲ್ಲಿ ರಾಜ್ಯದೊಂದಿಗೆ ಮಾಡಿಕೊಂಡಿರುವ ಈ ಹೂಡಿಕೆ ಒಪ್ಪಂದಗಳು ನಿಗದಿತ ಅವಧಿಯಲ್ಲಿ ಜಾರಿಗೆ ಬರುವಂತಾಗಬೇಕು. ಇದಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿಗಳು ಎರಡೂ ಕಂಪೆನಿಗಳ ಮುಖ್ಯಸ್ಥರಿಗೆ ತಿಳಿಸಿದರು.
ಪೆಟ್ರೋನಾಸ್ ಹೈಡ್ರೋಜನ್ ಸಂಸ್ಥೆಯು ಮಂಗಳೂರಿನಲ್ಲಿ ನವೀಕರಿಸಬಹುದಾದ ಇಂಧನ ಘಟಕವನ್ನು ಸ್ಥಾಪಿಸಲು 31,200 ಕೋಟಿ ರೂ. ಹೂಡಿಕೆ ಮಾಡುವ ಸಂಬಂಧ ಸಹಿ ಹಾಕಿದೆ. ಇದರಿಂದ 3,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಕಾಂಟಿನೆಂಟಲ್ ಇಂಡಿಯಾ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮೂಲಕ 1000 ಕೋಟಿ ರೂ. ಬಂಡವಾಳ ಹೂಡಲಿದ್ದು, ಇದರಿಂದ 6000 ಜನರಿಗೆ ಉದ್ಯೋಗ ದೊರೆಯಲಿದೆ.
ಆಟೋಮೋಟಿವ್ ಸಾಫ್ಟ್ವೇರ್ ಅಭಿವೃದ್ಧಿ, ಸಂವಹನ ತಂತ್ರಜ್ಞಾನ ಉದ್ಯಮದಲ್ಲಿ ತೊಡಗಿರುವ ಟೆಕ್ ಕಂಪನಿ ಕಾಂಟಿನೆಂಟಲ್ – ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ, ಟೆಕ್ನಿಕಲ್ ಸೆಂಟರ್ ಇಂಡಿಯಾ (ಟಿಸಿಐ) ಯ ವಿಸ್ತರಣೆಗಾಗಿ 1000 ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದೆ. ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಆಟೋಮೋಟಿವ್ ಆರ್ ಅಂಡ್ ಡಿ ಪರಿಸರ ವ್ಯವಸ್ಥೆಗೆ ಈ ಪ್ರಸ್ತಾವಿತ ಹೂಡಿಕೆ ಪೂರಕವಾಗಲಿದೆ.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ, ಐಟಿ ಬಿಟಿ ಸಚಿವ ಡಾ. ಸಿಎನ್. ಅಶ್ವತ್ಥನಾರಾಯಣ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.