ನವದೆಹಲಿ: ವಿಶೇಷ ಚೇತನ ಅಭ್ಯರ್ಥಿಗಳಿಗೆ ಐಪಿಎಸ್, ಐಆರ್‌ಪಿಎಫ್‌ಎಸ್, ಡಿಎಎನ್‌ಐಪಿಎಸ್‌ಗಳಿಗೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಿದೆ.
ನಾಗರಿಕ ಸೇವೆಗಳ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿಶೇಷ ಚೇತನ ಅಭ್ಯರ್ಥಿಗಳಿಗೆ ಏಪ್ರಿಲ್ 1 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ರೈಲ್ವೇಸ್ ಪ್ರೊಟೆಕ್ಷನ್ ಫೋರ್ಸ್ ಸೇವೆ (ಐಆರ್‌ಪಿಎಫ್‌ಎಸ್) ಹಾಗೂ ದೆಹಲಿ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪ ಪೊಲೀಸ್ ಸೇವೆ (ಡಿಎಡನ್‌ಐಪಿಎಸ್) ಗೆ ಆಯ್ಕೆಗಾಗಿ ಕೇಂದ್ರ ಸಾರ್ವಜನಿಕ ಸೇವಾ ಆಯೋಗಕ್ಕೆ ತಾತ್ಕಾಲಿಕವಾಗಿ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ನ್ಯಾಯಮೂರ್ತಿ ಎ.ಎಂ ನೇತೃತ್ವದ ಪೀಠ ಏಪ್ರಿಲ್ 1ರ ಸಂಜೆ 4 ಗಂಟೆಯವರೆಗೆ ಭೌತಿಕವಾಗಿ ಹಾಜರಾಗಿ ಅಥವಾ ಕೊರಿಯರ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲು ಯುಪಿಎಸ್‌ಸಿಯ ಪ್ರಧಾನ ಕಾರ್ಯದರ್ಶಿಗೆ ಖಾನ್ವಿಲ್ಕರ್‌ರಿಗೆ ನಿರ್ದೇಶನ ನೀಡಿದ್ದಾರೆ. ಅಂಗವಿಕಲರನ್ನು ಈ ಸೇವೆಗಳಿಂದ ಹೊರಗಿಡುವ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಎಂಬ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ ನೇತೃತ್ವದ ಪೀಠ ಏಪ್ರಿಲ್ 1ರ ಸಂಜೆ 4 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ನ್ಯಾಯಾಲಯ ನಾಗರಿಕ ಸೇವೆಗಳಲ್ಲಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯು ಅಡೆತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನದ ಹಂತವು ಏಪ್ರಿಲ್ 5 ರಿಂದ ಪ್ರಾರಂಭವಾಗುತ್ತದೆ. ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎನ್‌ಜಿಒ ಅರ್ಜಿಗೆ ಉತ್ತರವನ್ನು ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ್ದಾರೆ. ಆದರೆ ಎನ್‌ಜಿಒ ಪರ ಹಿರಿಯ ವಕೀಲ ಅರವಿಂದ ದಾತಾರ್, ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅನೇಕ ವಿಶೇಷ ಚೇತನ ಅಭ್ಯರ್ಥಿಗಳು ಮಾರ್ಚ್ 24 ರೊಳಗೆ ಗಡುವು ಮುಗಿದ ಕಾರಣ ಸೇವೆಗಳ ವಿವಿಧ ಶಾಖೆಗಳಲ್ಲಿ ತಮ್ಮ ಆದ್ಯತೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇನ್ನು ಸರ್ಕಾರದ ಪರವಾಗಿ ಮಾತನಾಡಿದ ವೇಣುಗೋಪಾಲ್, ಈ ಅರ್ಜಿಯನ್ನು ಅವಲೋಕಿಸಲಾಗುವುದು. ಅಭ್ಯರ್ಥಿಗಳು ದೈಹಿಕವಾಗಿ ಅರ್ಜಿ ಸಲ್ಲಿಸಬಹುದು. ಎನ್‌ಜಿಒ ಪ್ರಕರಣದಲ್ಲಿ ನ್ಯಾಯಾಲಯವು ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಅವರ ಅರ್ಜಿಗಳನ್ನು ಪ್ರತ್ಯೇಕವಾಗಿ ಇಡಬಹುದು ಎಂದು ಹೇಳಿದರು.