ಉಡುಪಿ: ಪ್ರಸಿದ್ಧ ಸಸ್ಯ ವಿಜ್ಞಾನಿ ಹಾಗೂ ಪೂರ್ಣಪ್ರಜ್ಞ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಗೋಪಾಲಕೃಷ್ಣ ಭಟ್ ಗುರುವಾರ ಬೆಳಿಗ್ಗೆ ಚಿಟ್ಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿಯನ್ನು ಅಗಲಿದ್ದಾರೆ. ಸಸ್ಯ ವರ್ಗೀಕರಣ ಶಾಸ್ತ್ರದಲ್ಲಿ ಅಪಾರ ಅಧ್ಯಯನ ನಡೆಸಿದ್ದ ಕೆ.ಜಿ.ಭಟ್ಟರು, ‘ಫ್ಲೋರಾ ಆಫ್ ಉಡುಪಿ, ಫ್ಲೋರಾ ಆಫ್ ದಕ್ಷಿಣ ಕನ್ನಡ’ ಎಂಬ ಬೃಹತ್ ಸಸ್ಯಶಾಸ್ತ್ರೀಯ ನಿಘಂಟು ಹಾಗೂ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದರು.
ಉಭಯ ಜಿಲ್ಲೆಗಳಲ್ಲಿರುವ ಸಮಗ್ರ ಸಸ್ಯಪ್ರಬೇಧಗಳ ಮಾಹಿತಿಯನ್ನು ಜಗತ್ತಿಗೆ ಪರಿಚಯಿಸಿದ್ದರು. ಮಣಿಪಾಲದ ಬಳಿ ಕೆ.ಜಿ.ಭಟ್ಟರು ಪತ್ತೆ ಹಚ್ಚಿದ ಸಸ್ಯಪ್ರಭೇದವೊಂದಕ್ಕೆ ಲಂಡನ್‌ನ ಪ್ರತಿಷ್ಠಿತ ಬಯೋಲಜಿಕಲ್ ಸೊಸೈಟಿಯು ‘ಪ್ಯಾರಾಕೈಟ್ಲಿಯ ಭಟ್ಟಿಯೈ’ ಎಂಬ ಹೆಸರನ್ನಿಟ್ಟು ಭಟ್ಟರಿಗೆ ಗೌರವ ಸೂಚಿಸಿತ್ತು.
ಸಸ್ಯಗಳ ವೈಜ್ಞಾನಿಕ ವರ್ಗೀಕರಣದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಡಾ.ಕೆ.ಜಿ.ಭಟ್ಟರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಈಚೆಗೆ ಪ್ರೊ. ಅರವಿಂದ ಹೆಬ್ಬಾರ್ ರಚಿಸಿದ ‘ಟ್ಯಾಕ್ಸೋನೊಮಿ ಭಟ್ಟರ ಯಾನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಕೆ.ಜಿ.ಭಟ್ಟರ ನಿಧನಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.