ನವದೆಹಲಿ: ವಿಶ್ವದಾಖಲೆ ಸ್ಥಾಪಿಸಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣದ ಬಿಡುಗಡೆ ಇದೇ ತಿಂಗಳು ಇದೆ. ಫೆಬ್ರುವರಿ 24ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹಣ ರಿಲೀಸ್ ಮಾಡಲಿದ್ದಾರೆ.
ಈ ಸಂಗತಿಯನ್ನು ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ಈ 19ನೇ ಕಂತಿನ ಹಣ ಫೆಬ್ರುವರಿ ಕೊನೆಯ ವಾರದಲ್ಲಿ ಬಿಡುಗಡೆ ಆಗಬಹುದು ಎಂದು ಈ ಹಿಂದೆ ಹಲವು ವರದಿಗಳು ಅಂದಾಜು ಮಾಡಿದ್ದವು. ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಸುಳಿವು ನೀಡಿದ್ದರು. ಇದೀಗ ಫೆಬ್ರುವರಿ 24ರಂದು ಹಣ ಬಿಡುಗಡೆ ಆಗುವುದು ಖಾತ್ರಿಯಾಗಿದೆ. ಮುಂದಿನ ಸೋಮವಾರ ಫಲಾನುಭವಿ ರೈತರು ತಮ್ಮ ಖಾತೆಗೆ 2,000 ರೂ ಬರಬಹುದೆಂದು ನಿರೀಕ್ಷಿಸಬಹುದು.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸರ್ಕಾರವು ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಿ ವರ್ಷಕ್ಕೆ 6,000 ರೂನಷ್ಟು ಹಣ ನೀಡುತ್ತದೆ. ಈ 6,000 ರೂ ಹಣವನ್ನು ವರ್ಷದಲ್ಲಿ ಮೂರು ಕಂತುಗಳಲ್ಲಿ ನೀಡುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ಹಾಕುತ್ತದೆ. ಏಪ್ರಿಲ್ನಿಂದ ಜುಲೈ, ಆಗಸ್ಟ್ ನಿಂದ ನವೆಂಬರ್, ಡಿಸೆಂಬರ್ನಿಂದ ಮಾರ್ಚ್ ಹೀಗೆ ಮೂರು ಬಾರಿ ಸರ್ಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ.
ಈ ಯೋಜನೆಯಲ್ಲಿ 9 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಕೃಷಿ ಜಮೀನು ಹೊಂದಿದವರು ಈ ಯೋಜನೆಗೆ ನೊಂದಾಯಿಸಬಹುದು. ಕೆಲ ಷರತ್ತುಗಳೂ ಇವೆ. ವೈದ್ಯ, ಎಂಜಿನಿಯರ್ ಇತ್ಯಾದಿ ವೃತ್ತಿಪರರು, ಶಾಸಕ, ಸಂಸದರು, ಸರ್ಕಾರಿ ನೌಕರರು, ಐಟಿ ಪಾವತಿದಾರರು ಮೊದಲಾದವರು ಕೃಷಿ ಜಮೀನು ಹೊಂದಿದ್ದರೂ ಯೋಜನೆಗೆ ಅನರ್ಹರಾಗಿರುತ್ತಾರೆ.
ಯೋಜನೆಯಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿ
ನೀವು ಯೋಜನೆಗೆ ನೊಂದಾಯಿಸಿದ್ದು ಈ 19ನೇ ಕಂತಿನ ಹಣ ನಿಮ್ಮ ಕೈಸೇರುತ್ತದೋ ಇಲ್ಲವೋ ಎಂದು ಆತಂಕಗೊಂಡಿರಬಹುದು. ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ.
ಮೊದಲಿಗೆ ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಹೋಗಿರಿ: pmkisan.gov.in/
ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ ಕಾಣುತ್ತೀರಿ. ಇಲ್ಲಿ ‘ಬೆನಿಫಿಷಿಯರಿ ಲಿಸ್ಟ್’ ಅನ್ನು ಕ್ಲಿಕ್ ಮಾಡಿ.
ನಂತರ, ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು ಹಾಗು ಊರನ್ನು ಆಯ್ದುಕೊಂಡರೆ, ಆ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ಕಾಣಬಹುದು. ಇದರಲ್ಲಿ ನಿಮ್ಮ ಹೆಸರಿದೆಯಾ ಗಮನಿಸಿ ನೋಡಿ.