ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೆಹಲಿಯ ರಾಯ್ ಪಿಥೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ‘ದಿ ಲೈಟ್ & ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್’ ಎಂಬ ಪಿಪ್ರಹ್ವಾ ರೆಲಿಕ್ಸ್ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದ್ದಾರೆ.
127 ವರ್ಷಗಳ ನಂತರ ಭಾರತಕ್ಕೆ ತರಲಾದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಬಗ್ಗೆ ದೇಶಕ್ಕೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಲಾಗಿದೆ. ಈ ಪ್ರದರ್ಶನದಲ್ಲಿ 1898 ರ ಉತ್ಖನನ ಮತ್ತು 1971-1975 ರ ಪಿಪ್ರಹ್ವಾ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ಪತ್ತೆಯಾದ ಅವಶೇಷಗಳು, ರತ್ನದ ಅವಶೇಷಗಳನ್ನು ಇಡಲಾಗಿದೆ. ಪ್ರಧಾನಿ ಮೋದಿ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಪ್ರದರ್ಶನ ದೇಶದ ಐತಿಹಾಸಿಕ ಸಾಂಸ್ಕೃತಿಯ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರ ಪಿಪ್ರಾಹ್ವಾ ಅವಶೇಷಗಳನ್ನು ಮರಳಿ ತರಲಾಗಿದೆ. ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಕೋಲ್ಕತ್ತಾದ ಭಾರತೀಯ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಸಂಗ್ರಹ ಮಾಡಲಾಗಿದೆ.
ಈ ಪ್ರದರ್ಶನವು ಭಗವಾನ್ ಬುದ್ಧನ ಉದಾತ್ತ ಚಿಂತನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ನಮ್ಮ ಯುವಜನರು ಮತ್ತು ನಮ್ಮ ಶ್ರೀಮಂತ ಸಂಸ್ಕೃತಿಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುವ ಪ್ರಯತ್ನದಲ್ಲಿ ಒಂದಾಗಿದೆ. ಈ ಅವಶೇಷಗಳ ವಾಪಸಾತಿಗೆ ಶ್ರಮಿಸಿದ ಪ್ರತಿಯೊಬ್ಬರನ್ನು ನಾನು ಕೃತಜ್ಞತೆಯಿಂದ ಶ್ಲಾಘಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಇಡಲಾಗಿದ್ದ ಪ್ರದರ್ಶನಗಳು ದೇಶ ಮತ್ತು ವಿದೇಶಿದಿಂದ ಇತಿಹಾಸಕಾರರು, ಸಾಂಸ್ಕೃತಿಕ ಉತ್ಸಾಹಿಗಳು ಮತ್ತು ಬೌದ್ಧ ಅನುಯಾಯಿಗಳ ಗಮನ ಸೆಳೆದಿದ್ದು, ಭಾರತದ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುವ ಮತ್ತು ಆಚರಿಸುವ ಪ್ರಯತ್ನಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಅವರು ಇದಕ್ಕೂ ಮೊದಲು ಸಾವಿತ್ರಿಬಾಯಿ ಫುಲೆ ಮತ್ತು ರಾಣಿ ವೇಲು ನಾಚಿಯಾರ್ ಅವರ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಅವರಿಗೆ ಗೌರವ ಸಲ್ಲಿಸಿದ್ದಾರೆ. ಸೇವೆ ಮತ್ತು ಶಿಕ್ಷಣದ ಮೂಲಕ ಭಾರತೀಯ ಸಮಾಜವನ್ನು ಪರಿವರ್ತಿಸುವಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರ ದೊಡ್ಡದ್ದು ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.















