
ಶ್ರೀನಗರ: ಭಯೋತ್ಪಾದಕ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ವಿಶ್ವದ ಅತಿ ಎತ್ತರದ ರೈಲು ಸೇತುವೆಯಾದ ಚೆನಾಬ್ ಬ್ರಿಜ್ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅಂಜಿ ನದಿಯ ಮೇಲೆ ನಿರ್ಮಿಸಲಾದ ಭಾರತದ ಮೊಟ್ಟ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆಯನ್ನೂ ಉದ್ಘಾಟಿಸಿದರು.
ಈ ಮಹತ್ವದ ಕ್ಷಣದಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ರಾಜ್ಯಪಾಲ ಮನುಜ್ ಸಿನ್ಹಾ ಉಪಸ್ಥಿತರಿದ್ದರು. ಉದ್ಘಾಟನೆ ನಂತರ ರಾಷ್ಟ್ರಧ್ವಜ ಹಿಡಿದು ಒಂದು ಸುತ್ತು ಪ್ರದಕ್ಷಿಣೆ ಹಾಕಿದರು.
ಚೆನಾಬ್ ಸೇತುವೆಯ ಉದ್ಘಾಟನೆಯ ನಂತರ ಕತ್ರಾ-ಶ್ರೀನಗರ ನಡುವಿನ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ನಂತರ ಪ್ರಧಾನಿಯವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಕುತೂಹಲಗಳಿಗೆ ಉತ್ತರಿಸಿದರು.
ಪ್ರಧಾನಿ ಮೋದಿ ಈ ಪ್ರವಾಸದ ಸಂದರ್ಭದಲ್ಲಿ 46,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇದರಲ್ಲಿನ ಪ್ರಮುಖ ಯೋಜನೆಗಳಲ್ಲಿ, 350 ಕೋಟಿ ರೂ. ವೆಚ್ಚದ ಶ್ರೀ ಮಾತಾ ವೈಷ್ಣೋದೇವಿ ವೈದ್ಯಕೀಯ ಸಂಸ್ಥೆಯ ಶಂಕುಸ್ಥಾಪನೆಯೂ ಸೇರಿದೆ. ಈ ಆಸ್ಪತ್ರೆ ಕತ್ರಾ ಪಟ್ಟಣದ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಸಹಕಾರಿ ಆಗಲಿದೆ.
ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ರೈಲು ಸೇತುವೆ, ಐಫೆಲ್ ಟವರ್‌ಗಿಂತಲೂ ಎತ್ತರ ಹೊಂದಿದ್ದು, ವಿಶ್ವದ ಅತಿ ಎತ್ತರದ ರೈಲು ಸೇತುವೆಯಾಗಿ ಗುರುತಿಸಿಕೊಂಡಿದೆ. ಇದರ ಕಮಾನು ಭಾಗದ ನಿರ್ಮಾಣ 2021ರಲ್ಲಿಯೇ ಪೂರ್ಣಗೊಂಡಿತ್ತು.
ಈ ಸೇತುವೆಯನ್ನು ಅಂದಾಜು 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪ್ಯಾರಿಸ್‌ನ ಐಫೆಲ್ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿ ನಿರ್ಮಾಣವಾಗಿದೆ. ಚೆನಾಬ್ ಸೇತುವೆ ಚೆನಾಬ್ ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣವಾಗಿದ್ದು, 1.3 ಕಿ.ಮೀ. ಉದ್ದವಿದೆ. ಇದರ ಉಕ್ಕಿನ ಕಮಾನುಗಳು ಭೂಕಂಪನ, ಬಲವಾದ ಗಾಳಿಯನ್ನೂ ತಡೆಯುವ ಸಾಮರ್ಥ್ಯ ಹೊಂದಿದೆ.
ರೈಲ್ವೇ ಮಾರ್ಗದ 111 ಕಿ.ಮೀ ನಲ್ಲಿ 97 ಕಿ.ಮೀ ನಷ್ಟು ಸುರಂಗ ಮಾರ್ಗವೇ ಇದೆ. ಇಷ್ಟು ದೂರದ ಸುರಂಗ ಮಾರ್ಗ ದೇಶದ ಬೇರೆ ಯಾವ ಭಾಗಗಳಲ್ಲೂ ಮಾಡಲಾಗಿಲ್ಲ.













